ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸಂಗಪ್ಪ ಎಂ. ಮಾತನಾಡಿದರು. ಎಸ್ಪಿ ಸಿದ್ಧಾರ್ಥ ಗೋಯಲ್, ಜಿ.ಪಂ. ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಉಪಸ್ಥಿತರಿದ್ದರು. 
ಬಾಗಲಕೋಟೆ

ಏ. 9ರಂದು ಮತದಾನ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಎಂ. ಮಾಹಿತಿ
  • ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿ
  • ನಾಮಪತ್ರ ಸಲ್ಲಿಕೆ ಆರಂಭ
ಬಾಗಲಕೋಟೆ: ಭಾರತ ಚುನಾವಣಾ ಆಯೋಗವು ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು, ಉಪ ಚುನಾವಣೆಗೆ ಏ. 9ರಂದು ಮತದಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸಂಗಪ್ಪ ಎಂ. ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗೆ ಮಾ. 16ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಮಾ. 23 ಕೊನೆಯ ದಿನವಾಗಿದೆ. ಮಾ. 24 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾ. 26 ಕೊನೆಯ ದಿನವಾಗಿದೆ. ಏ. 9ರಂದು ಮತದಾನ ನಡೆಯಲಿದ್ದು, ಮತ ಏಣಿಕೆ ಮೇ 4ರಂದು ನಡೆಯಲಿದೆ. ಮಾದರಿ ನೀತಿ ಸಂಹಿತೆಯು ಮಾ.15ರಿಂದ ಜಿಲ್ಲೆಯಾದ್ಯಂತ ಜಾರಿಯಾಗಿದೆ ಎಂದು ತಿಳಿಸಿದರು.

ಮತಕ್ಷೇತ್ರದಲ್ಲಿ 2.59 ಲಕ್ಷ ಮತದಾರರು

ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಈಗಾಗಲೇ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮತಕ್ಷೇತ್ರದಲ್ಲಿ ಒಟ್ಟು 319 ಮತಗಟ್ಟೆಗಳಿದ್ದು, ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 176, ನಗರ ಪ್ರದೇಶದಲ್ಲಿ 143 ಮತಗಟ್ಟೆಗಳಿವೆ. ಫೆ. 14ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಾರ ಒಟ್ಟು 2,59,260 ಮತದಾರರಿದ್ದು, ಅದರಲ್ಲಿ 1,26,761 ಪುರುಷ, 1,32,476 ಮಹಿಳಾ ಮತದಾರರಿದ್ದಾರೆ. ಯುವ ಮತದಾರರು ಒಟ್ಟು 4188 ಹಾಗೂ 85ಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರು 3017, ಅಂಗವಿಕಲ ಮತದಾರರು 2633, 100ಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರು 38 ಹಾಗೂ 391 ಸೇವಾ ಮತದಾರರು ಇದ್ದಾರೆ ಎಂದರು.

ನೀತಿ ಸಂಹಿತೆಗೆ ತಂಡಗಳ ರಚನೆ

ಜಿಲ್ಲೆಯಲ್ಲಿ ಜಿ.ಪಂ. ಸಿಇಒ ಮಾದರಿ ನೀತಿ ಸಂಹಿತೆಯ ನೋಡಲ್ ಅಽಕಾರಿಯಾಗಿದ್ದು, ಅಭ್ಯರ್ಥಿಯ 40 ಲಕ್ಷ ರೂ. ಗಳವೆರಗೆ ಖರ್ಚು ಮಾಡಬಹುದಾಗಿದೆ. ಜಿಲ್ಲೆಯಾದ್ಯಂತ ಒಟ್ಟು 29 ಸೆಕ್ಟರ್ ಅಽಕಾರಿಗಳು, 60 ಪ್ಲಾಯಿಂಗ್ ಸ್ಕ್ವಾಡ್, 24 ಚೆಕ್‌ಪೋಸ್ಟ್, 72 ಸ್ಟಾಟಿಕ್ ಸರ್ವೆಲೆನ್ಸ್ ತಂಡ, 22 ವಿಡಿಯೋ ಸರ್ವೇಲೆನ್ಸ್ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ 535 ಸಿಯು, 523 ಬಿಯು ಹಾಗೂ 517 ವಿವಿಪ್ಯಾಟ್ ಮಸೀನ್‌ಗಳನ್ನು ಪ್ರಥಮ ಹಂತದ ತಪಾಸಣೆ ಮಾಡಲಾಗಿದೆ. ವಿದ್ಯುನ್ಮಾನ ಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಬಳಸಿ ಮತದಾನ ಮಾಡುವ ಕುರಿತು ಮತದಾರರಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹ ಸಿವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಚುನಾವಣಾ ಅಧಿಕಾರಿಗಳ ವಿವರ

ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಸಂಗಪ್ಪ, ಮಾದರಿ ನೀತಿ ಸಂಹಿತೆ ಪಾಲನಾ ನೋಡಲ್ ಅಧಿಕಾರಿಯಾಗಿ ಜಿ.ಪಂ. ಸಿಇಒ ಶಶಿಧರ ಕುರೇರ, ಜಿಲ್ಲಾ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯ ಚುನಾವಣಾಧಿಕಾರಿ ಹಾಗೂ ಮತದಾರರ ನೋಂದಣಿ ಅಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ಬಾಗಲಕೋಟೆ ತಹಸೀಲ್ದಾರ ವಾಸುದೇವ ಸ್ವಾಮಿ, ಹುನಗುಂದ ತಹಸೀಲ್ದಾರ ಡಾ.ಪ್ರದೀಪಕುಮಾರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಜಿ.ಪಂ ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಉಪಸ್ಥಿತರಿದ್ದರು.

ಜಿಲ್ಲೆಯಾದ್ಯಂತ 24 ಚೆಕ್ ಪೋಸ್ಟ್ ಸ್ಥಾಪನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ. ಬಾಗಲಕೋಟೆ ಮತಕ್ಷೇತ್ರದಲ್ಲಿ ಸೂಕ್ಷ್ಮ , ಅತೀ ಸೂಕ್ಷ್ಮ ಮತಗಟ್ಟಿ ಗುರುತಿಸಲಾಗಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಅನಽಕೃತವಾಗಿ ಹಣ ಸಾಗಾಣಿಕೆ, ಸಾಮಗ್ರಿ ಸಾಗಾಣಿಕೆ ಹಾಗೂ ಇತರೆ ಸಾಮಗ್ರಿಗಳನ್ನು ಅನಽಕೃತವಾಗಿ ಸಾಗಿಸುತ್ತಿರುವ ಬಗ್ಗೆ ಕಣ್ಗಾವಲು ಇಡುವ ಉದ್ದೇಶದಿಂದ 24 ಚೆಕ್‌ಪೋಸ್ಟ್ಗಳನ್ನು ರಚಿಸಲಾಗಿದೆ.
ಮುಧೋಳ ಕ್ಷೇತ್ರದಲ್ಲಿ ಯಾದವಾಡ ಸರ್ಕಲ್, ಲಕ್ಷಾನಟ್ಟಿ ಕ್ರಾಸ್, ಸಂಗೊಳ್ಳಿ ರಾಯಣ್ಣ ಸರ್ಕಲ್, ತೇರದಾಳ ಕ್ಷೇತ್ರದಲ್ಲಿ ಬುದ್ನಿ ಪಿಡಿ ಕ್ರಾಸ್, 4ನೇ ಕೆನಾಲ್ ತೆರದಾಳ, ಎಪಿಎಂಸಿ ಕ್ರಾಸ್ ಮಹಾಲಿಂಗಪುರ, ಜಮಖಂಡಿ ಕ್ಷೇತ್ರದಲ್ಲಿ ಚಿಕ್ಕಲಕಿ ಕ್ರಾಸ್, ಹುನ್ನೂರ, ಹುಲ್ಯಾಳ ಕ್ರಾಸ್, ಬೀಳಗಿ ಕ್ಷೇತ್ರದಲ್ಲಿ ಕೊರ್ತಿ ಕೋಲ್ಹಾರ ಬ್ರಿಡ್ಜ್, ಅನಗವಾಡಿ ಕ್ರಾಸ್, ಯಡಹಳ್ಳಿ ಕ್ರಾಸ್, ಬಾದಾಮಿ ಕ್ಷೇತ್ರದಲ್ಲಿ ಜಾಲಿಹಾಳ ಕ್ರಾಸ್, ಕುಳಗೇರಿ ಕ್ರಾಸ್ (ಹುಬ್ಬಳ್ಳಿ ರೋಡ), ಕುಳಗೇರಿ ಕ್ರಾಸ್ (ರಾಮದುರ್ಗ ರೋಡ), ಹಳದೂರ ಕ್ರಾಸ್, ಬಾಗಲಕೋಟೆ ಮತಕ್ಷೇತ್ರದಲ್ಲಿ ಹೊಸೂರ ಕ್ರಾಸ್, ಹೊನ್ನಾಕಟ್ಟಿ ಕ್ರಾಸ್, ಟಾಲ್ ನಾಕಾ ಹತ್ತಿರ ನಾಯನೇಗಲಿ, ಐಬಿ ಕ್ರಾಸ್ ಕಮತಗಿ, ಧನ್ನೂರ, ಗುಗ್ಗಲಮರಿ, ಗುಡೂರ ಎಸ್‌ಸಿ (ಹೂಲಗೇರಿ ಕ್ರಾಸ್)ನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.