ಉತ್ತೂರ ಗ್ರಾಮದೇವತೆಯರು 
ಬಾಗಲಕೋಟೆ

ಇಂದಿನಿಂದ ಗ್ರಾಮದೇವತೆ ಭಂಡಾರ ಜಾತ್ರೆ

ಶಿಲ್ಪಾ ಪವಾರ
ಮುಧೋಳ: ತಾಲೂಕಿನ ಉತ್ತೂರ ಗ್ರಾಮದಲ್ಲಿ ಮೇ 4ರಿಂದ 9ರವರೆಗೆ ಗ್ರಾಮದೇವತೆ ಭಂಡಾರ ಜಾತ್ರೆ, ಬಸವೇಶ್ವರ ಮಹಾರಥೋತ್ಸವ ಹಾಗೂ ಮಾರುತೇಶ್ವರ ಓಕುಳಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಆರು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಉತ್ಸವದಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಹಾಗೂ ದೈವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ 4ರಂದು ರಾತ್ರಿ `ಅಜಾತ ನಾಗಲಿಂಗ' ಎಂಬ ದೈವಿನಾಟಕದೊಂದಿಗೆ ಸಂಭ್ರಮಕ್ಕೆ ಚಾಲನೆ ದೊರೆಯಲಿದ್ದು, ಮೇ 5ರಂದು ದೇವಿಗೆ ಕುಂಭ ಆರತಿ ಹಾಗೂ ಚೌಡಕಿ ಪದಗಳ ಕಾರ್ಯಕ್ರಮಗಳು ನಡೆಯಲಿವೆ.
ಮೇ 6ರಂದು ಮಧ್ಯಾಹ್ನ ಹೋಮ ಹವನ ಹಾಗೂ ಮಹಾಪ್ರಸಾದ ವಿತರಣೆ ನಂತರ ಸೈನಿಕ ವಿವಿಧೋದ್ದೇಶಗಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ರೈತಗೋಷ್ಠಿ ಆಯೋಜಿಸಲಾಗಿದೆ.
ಮೇ 7ರಂದು ಬಸವೇಶ್ವರ ಮಹಾರಥೋತ್ಸವ ವಿವಿಧ ವಾದ್ಯಮೇಳದೊಂದಿಗೆ ಜರುಗಲಿದೆ, ಅಂದು ರಾತ್ರಿ ಜೈ ಭಜರಂಗಿ ಮೆಲೋಡೀಸ್ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ. ಮೇ 8ರಂದು ಗ್ರಾಮದೇವಿಗೆ ಉಡಿ ತುಂಬುವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿದೆ
.
ಮೇ 9ರಂದು ಮಾರುತೇಶ್ವರ ಓಕುಳಿ ಸಂಭ್ರಮದೊಂದಿಗೆ ಜಾತ್ರೆಗೆ ತೆರೆ ಬೀಳಲಿದ್ದು, ಅಂದು ರಾತ್ರಿ `ಸೇಡಿಗಾಗಿ ಸಿದ್ದೆದ್ದ ಶಿವನಾಗ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಗ್ರಾಮ ದೇವತೆ ಜಾತ್ರಾ ಕಮಿಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.