ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ, ಸಂತ್ರಸ್ತರ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿದರು. ಶರಣಪ್ಪ ಮುಳ್ಳೂರ, ಹಸನಸಾಬ ಪಿಂಜಾರ ಇತರರಿದ್ದರು.
- ಬೇಡಿಕೆ ಈಡೇರುವವರೆಗೂ ಇದ್ದಲಗಿಯಲ್ಲಿ ಸಂತ್ರಸ್ತರ ಅನಿರ್ದಿಷ್ಟ ಧರಣಿ ಮುಂದುವರಿಕೆ
- ಶಾಸಕ ವಿಜಯಾನಂದ ಕಾಶಪ್ಪನವರ ಸಂತ್ರಸ್ತರ ಮನವಿ ಸ್ವೀಕರಿಸಿ, ಶಿಥಿಲಗೊಂಡ ಶೆಡ್‌ಗಳನ್ನು ತಕ್ಷಣ ದುರಸ್ತಿ ಮಾಡುವುದಾಗಿ ಭರವಸೆ
- ಸಂತ್ರಸ್ತರು ಶಾಸಕರ ಭರವಸೆಗೆ ತಪ್ತರಾಗದೆ, ಸಂಪೂರ್ಣ ಬೇಡಿಕೆಗಳು ಈಡೇರುವವರೆಗೂ ಧರಣಿ ಹಿಂತೆಗೆದುಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದರು
ಹುನಗುಂದ : ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು ಶೆಡ್ ಪುನರ್ನಿರ್ಮಾಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಮಂಗಳವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ ಸಂತ್ರಸ್ತರ ಮನವಿ ಸ್ವೀಕರಿಸಿ, ಶಿಥಿಲಗೊಂಡ ಶೆಡ್‌ಗಳನ್ನು ತಕ್ಷಣ ದುರಸ್ತಿ ಮಾಡುವುದಾಗಿ ಭರವಸೆ ನೀಡಿ, ಪುನರ್ವಸತಿ ಕೇಂದ್ರದಲ್ಲಿ ನೀರು, ವಿದ್ಯುತ್ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಿದ ನಂತರ ಮೂರು ತಿಂಗಳೊಳಗೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.
ಆದರೆ, ಸಂತ್ರಸ್ತರು ಶಾಸಕರ ಭರವಸೆಗೆ ತಪ್ತರಾಗದೆ, ಸಂಪೂರ್ಣ ಬೇಡಿಕೆಗಳು ಈಡೇರುವವರೆಗೂ ಧರಣಿ ಹಿಂತೆಗೆದುಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದರು. ಕಳೆದ 15 ವರ್ಷಗಳಿಂದ ಶಾಶ್ವತ ಪರಿಹಾರ ಸಿಗದಿರುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ನಾರಾಯಣಪೂರದ ಪುನರ್ವಸತಿ ಹಾಗೂ ಪುನರ್ ನಿರ್ಮಾಣ (ಆರ್‌ಆರ್) ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಕೆಂದೊಳ್ಳಿ, ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆಯ ಅಧಿಕಾರಿಗಳಾದ ಸುಭಾಸ ಅರಬಾಳ, ಇಂಜಿನಿಯರ ಕೆ.ಎನ್. ಒಡೆಯರ, ಉಪ ತಹಸೀಲ್ದಾರ್ ಮಹೇಶ ಸಂದಿಗವಾಡ, ಭೂ ಸ್ವಾಧಿನಾಧಿಕಾರಿಗಳು ಸೇರಿ ಅಧಿಕಾರಿಗಳು ಮತ್ತಿತರರಿದ್ದರು.