ಲಿಂಗಾಯತ-ಬಸವ ಧರ್ಮ ಮಹಾ ಜಗದ್ಗುರು ಪೀಠದ 34ನೇ ಪೀಠಾರೋಹಣ ಸಮಾರಂಭದಲ್ಲಿ ಧ್ವಜಾರೋಹಣ ಬೆಳಗಾವಿ ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಮಾಡಿದರು. ಲಿಂಗಾಯತ- ಬಸವ ಧರ್ಮ ಮಹಾಜಗದ್ಗುರು ಪೀಠದ ಮಾತೆ ಗಂಗಾದೇವಿ, ನಿಜಗುಣಾನಂದ ಸ್ವಾಮೀಜಿ, ನಟರಾಜ ಸ್ವಾಮೀಜಿ ಇತರರಿದ್ದರು.
- ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ
- ಮಹಾ ಜಗದ್ಗುರು ಪೀಠದ 34ನೇ ಪೀಠಾರೋಹಣ
- ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿ ತಂದ ದಿನಗಳಲ್ಲಿ ಸೂಳೆಯರನ್ನು ಶರಣೆಯರನ್ನಾಗಿ ಮಾಡಿದ ಧರ್ಮ ಲಿಂಗಾಯತ.
ಕೂಡಲಸಂಗಮ: ಉಪ ನಿಷತ್ತು, ಭಗವದ್ಗೀತೆ, ವೇದ, ಆಗಮಗಳು ಲಿಂಗಾಯತರಿಗೆ ಪರಾಮರ್ಶ ಗ್ರಂಥಗಳು, ವಚನ ಸಾಹಿತ್ಯವೇ ಪಠ್ಯ ಪುಸ್ತಕ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ 39ನೇ ಶರಣ ಮೇಳದ ಮಂಗಳವಾರ ರಾತ್ರಿ ನಡೆದ ಲಿಂಗಾಯತ- ಬಸವ ಧರ್ಮ ಮಹಾಜಗದ್ಗುರು ಪೀಠದ 34ನೇ ಪೀಠಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿ ತಂದ ದಿನಗಳಲ್ಲಿ ಸೂಳೆಯರನ್ನು ಶರಣೆಯರನ್ನಾಗಿ ಮಾಡಿದ ಧರ್ಮ ಲಿಂಗಾಯತ. ಇಂತಹ ಪರಿವರ್ತನೆ ಯಾವ ಧರ್ಮದಲ್ಲಿ ಇದೆ. ಹೆಣ್ಣು ಮಕ್ಕಳ ಧಾರ್ಮಿಕ ಸ್ವಾತಂತ್ರೃಕ್ಕಾಗಿ ಸನಾತನ ಧರ್ಮದ ವಿರುದ್ಧ ಲಿಂಗಾಯತ ಧರ್ಮ ಹೋರಾಡಿತು ಎಂದು ಗರ್ವ, ಅಹಂಕಾರದಿಂದ ಹೇಳುವುದಿಲ್ಲ ಅಭಿಮಾನ, ಪ್ರೀತಿಯಿಂದ ಹೇಳುತ್ತೇವೆ ಎಂದರು.
ಸನಾತನ ಧರ್ಮದ ವೈಯಕ್ತಿಕ ನಿಂದನೆಗೆ ಎಂದು ನಾವು ಹೆದರುವುದಿಲ್ಲ. ತಾತ್ವಿಕ ಹೋರಾಟಕ್ಕೆ ಬನ್ನಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಶಿಷ್ಯರಾದ ನಾವು ಸಿದ್ಧರಿದ್ದೇವೆ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಕೊಟ್ಟ ನೆಲ, ಧರ್ಮ ಕ್ಷೇತ್ರ ಕೂಡಲಸಂಗಮ, ಈ ದೇಶ ಉಳಿದದ್ದು ಬುದ್ಧ, ಬಸವ, ಅಂಬೇಡ್ಕರರಿಂದ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.
ಬೆಳಗಾವಿ ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಧರ್ಮ ಧ್ವಜಾರೋಹಣ ಮಾಡಿ ಮಾತನಾಡಿ, ಬಸವಾದಿ ಶರಣರು, ಅವರ ತತ್ವಗಳನ್ನು ವಿರೋಧಿಸುವವರನ್ನು ನಾವು ವಿರೋಧಿಸುತ್ತೇವೆ, ಹೋರಾಟ ಮಾಡಲು ಸಿದ್ಧರಿದ್ದೇವೆ. ಶರಣರಿಗೆ, ವಚನ ಸಾಹಿತ್ಯಕ್ಕೆ ಧಕ್ಕೆ ಬಂದರೆ ರಾಜ್ಯದ ಎಲ್ಲ ಬಸವ ಭಕ್ತರು ಎದ್ದು ನಿಲ್ಲುವರು. ನಾವು ಹೊಸ ಧರ್ಮ ಕಟ್ಟಲು ಹೊರಟ್ಟಿಲ್ಲ. 12ನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮವನ್ನು ಇಂದು ಹೇಳುತ್ತಿದ್ದೇವೆ, ಪ್ರತಿಪಾದನೆ ಮಾಡುತ್ತಿದ್ದೇವೆ. ಬಸವಾದಿ ಶರಣರು ಕಟ್ಟಿದ ಧರ್ಮವನ್ನು ಕೆಲವರು ಇರಲು ಬಿಡುತ್ತಿಲ್ಲ. ಶರಣರ ಪುಣ್ಯಭೂಮಿಯಲ್ಲಿ ಶರಣರ ವಿಚಾರ ಹೇಳಲು ಬಿಡುವುದಿಲ್ಲ ಎಂದು ವ್ಯತಿರಿಕ್ತವಾಗಿ ಹೇಳುತ್ತಿರುವುದು ನೋವಿನ ಸಂಗತಿ. ನಮ್ಮ ಮನೆಯಲ್ಲಿ ಬೆಳೆದ ನಾಯಿ ನಮಗೆ ಬೊಗಳಿದರೆ ಅದಕ್ಕೆ ತಿದ್ಧಿ ಬುದ್ಧಿ ಹೇಳಬೇಕು, ಇಲ್ಲ ಹೊರಹಾಕಬೇಕು ಎಂದರು.
ಸಮಾರಂಭದಲ್ಲಿ ಬಸವ ಧರ್ಮ ಪೀಠದ ಜಂಗಮ ಮೂರ್ತಿಗಳು, ಗಣನಾಯಕ- ನಾಯಕಿಯರು ಇದ್ದರು. ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಚಂದ್ರಶೇಖರ ಇಟಗಿ ಅವರ ತ್ರಿದಳ, ಶ್ರೀಧರ ಗೌಡರ ಅವರ ಇದೇ ಅಂತರಂಗ ಸುದ್ದಿ, ಬಹಿರಂಗ ಸುದ್ದಿ ಗ್ರಂಥ ಬಿಡುಗಡೆ ಮಾಡಿದರು.
ಬಸವ ಧರ್ಮ ಪೀಠದಿಂದ ಶಿವರಾತ್ರಿಯ ನಿಮಿತ್ತ ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠಾರೋಹಣ ಸಮಾರಂಭ ಫೆ.27ರಂದು ಹಮ್ಮಿಕೊಂಡಿದೆ ಎಂದು ರಾಷ್ಟ್ರೀಯ ಬಸವ ದಳದ ಸದಸ್ಯ ಸುಧೀರ ವಾಲಿ ಹೇಳಿದರು.
ಲಿಂಗ ಯಾರ ಸ್ವತ್ತು ಅಲ್ಲ. ಲಿಂಗ ಕಟ್ಟಿದವರೇ ಲಿಂಗ ಮರೆತು ಮಾತನಾಡುತ್ತಿರುವುದು ಅಪಚಾರ. ಕೆಲವರು ತಮ್ಮ ಸ್ವಾರ್ಥಕ್ಕೆ ಶರಣ ಮೇಳವನ್ನು ರಣಮೇಳ ಮಾಡಲು ಹೊರಟ್ಟಿದ್ದಾರೆ. ಬಸವ ಭಕ್ತರು ಅದಕ್ಕೆ ಅವಕಾಶ ಕೊಡುವುದಿಲ್ಲ. ನಮಗೆ ಸಂಪತ್ತಿನ ಕೊರತೆ ಇಲ್ಲ. ಸಂಬಂಧದ ಕೊರತೆ ಇದೆ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಬಸವ ಧರ್ಮ ಪೀಠದ ಮೂಲಕ ಸಂಬಂಧ ಬೆಸೆಯುವ, ನಾಡು ಕಟ್ಟುವ ಕಾರ್ಯ ಮಾಡಿದರು.
ಮೈಸೂರು ಗಾವಡಗೆರೆ ಗುರು-ಲಿಂಗ-ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ
ಬಸವಾದಿ ಶರಣರ ತತ್ವ ವಿಚಾರದ ಮೇಲೆ ಸ್ಥಾಪಿತವಾದ ಪೀಠ ಬಸವ ಧರ್ಮ ಪೀಠ, ನಾಡಿನ ಜನಕ್ಕೆ ಬಸವಾದಿ ಶರಣರ ವಿಚಾರಗಳನ್ನು ಭಿತ್ತರಿಸುವ ಕಾರ್ಯ ಮಾಡಿದೆ.
ಮಾತೆ ಗಂಗಾದೇವಿ, ಕೂಡಲ ಸಂಗಮ