ಬಾಗಲಕೋಟೆಯ ಭೋವಿ ಗುರುಪೀಠದಿಂದ ಸೋಮವಾರ ನಗರದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಽÃಶರು ಹೆಜ್ಜೆ ಹಾಕಿದರು.
ಕಾಲಾತೀತ ವೈಚಾರಿಕ ದರ್ಶನ, ವಚನ ಸಾಹಿತ್ಯ. ವಚನ ಸಾಹಿತ್ಯವು ಕೇವಲ ಧಾರ್ಮಿಕ ಚೌಕಟ್ಟು ಅಥವಾ ದೇವತಾ ಸ್ತುತಿಗೆ ಸೀಮಿತವಾದ ಸಾಹಿತ್ಯ ಪ್ರಕಾರವಲ್ಲ. ಬದುಕಿನ ಸರ್ವತೋಮುಖ ದರ್ಶನ, ವೈಜ್ಞಾನಿಕ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಇಂದಿಗೂ ದಾರಿದೀಪವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶರಣಬಸವಾಶ್ರಮದಿಂದ ಸೋಮವಾರ ಜರುಗಿದ ಪಲ್ಲಕಿ ಉತ್ಸವದ ದಿವ್ಯ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ೧೨ನೆಯ ಶತಮಾನದ ಶರಣರು ಕಟ್ಟಿಕೊಟ್ಟ ಈ ಪರಂಪರೆಯು ಮಾನವ ಜೀವನದ ಪ್ರತಿಯೊಂದು ಆಯಾಮವನ್ನೂ ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಸ್ಪರ್ಶಿಸುವ ಒಂದು ಅದ್ಭುತ ಜೀವನ ದರ್ಶನವಾಗಿದೆ ಎಂದರು.
ಭೌತಿಕ ಪ್ರಪಂಚದ ನಿಗೂಢ ರಹಸ್ಯಗಳಿಂದ ಹಿಡಿದು ವ್ಯಕ್ತಿಯ ಅಂತರAಗದ ಶಾಂತಿಯವರೆಗೆ ಹಾಗೂ ಸಾಮಾಜಿಕ ಸೌಹಾರ್ದತೆಯಿಂದ ಹಿಡಿದು ವಿಜ್ಞಾನದ ತಳಹದಿಯವರೆಗೆ ಬೆಳಕು ಚೆಲ್ಲುವ ವಚನಗಳ ಬೋಧನೆಗಳು ಆಧುನಿಕ ಜಗತ್ತಿಗೂ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.
ಶರಣರು ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಿಸರ್ಗದ ನಿಯಮಗಳು, ಪರಿಸರ ಸಮತೋಲನ ಮತ್ತು ಶರೀರ ವಿಜ್ಞಾನದ ಕುರಿತು ಹಾಗೂ ವೈಜ್ಞಾನಿಕ ಒಳನೋಟ ಮತ್ತು ವೈಚಾರಿಕತೆಯು ವಚನಗಳಲ್ಲಿ ಆಳವಾದ ಉಲ್ಲೇಖಗಳಿವೆ. ಸಾಮಾಜಿಕ ಸಮಾನತೆ ಮತ್ತು ಕ್ರಾಂತಿ, ಜಾತಿ, ಲಿಂಗ ಮತ್ತು ವರ್ಗ ಭೇದಗಳಿಲ್ಲದ ಸಮಾನತೆಯ ಸಮಾಜ ನಿರ್ಮಾಣಕ್ಕೆ ಯುಗಪ್ರವರ್ತಕರಾಗಿ ವಚನಕಾರರು ತಳಹದಿ ಹಾಕಿದರು ಎಂದರು.
ವಚನಗಳು ಕೇವಲ ಭೂತಕಾಲದ ನೆನಪುಗಳಲ್ಲ, ಅವು ವರ್ತಮಾನದ ಅಗತ್ಯ ಮತ್ತು ಭವಿಷ್ಯದ ಆಶಾಕಿರಣ. ಸಮಾಜದ ಒಗ್ಗಟ್ಟು, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲು ವಚನಗಳ ಅಧ್ಯಯನ ಹಾಗೂ ಬದುಕಿನಲ್ಲಿ ಅವುಗಳ ಅಳವಡಿಕೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು, ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀಗಳು, ಭೋವಿ ಗುರುಪೀಠದ ಶ್ರೀಕಾಂತ ದೇವರು ಹಾಗೂ ಅಮರೇಶ್ವರ ಶಾಸ್ತಿçÃಗಳ ಸಮ್ಮುಖದಲ್ಲಿ ಪಲ್ಲಕಿ ಉತ್ಸವವು ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಬ ಕಳಸಗಳೊಂದಿಗೆ ಕಾರೇಹಳ್ಳದ ಶರಣಬಸವಾಶ್ರಮದಿಂದ ವಿವೇಕಾನಂದ ನಗರ ಹಾಗೂ ಲೋಕೋಪಯೋಗಿ ವಸತಿನಿಲಯದ ಮೂಲಕ ಸಂಚರಿಸಿತು.