ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಸಾಮಾಜಿಕ ವಿಜ್ಞಾನಗಳು ಮತ್ತು ಭಾಷೆಗಳಲ್ಲಿ ಸಮಕಾಲಿನ ಚರ್ಚೆಗಳು ವಿಷಯದ ಕುರಿತು ಆಯೋಜಿಸಿದ್ದ ರಾಷ್ಟ್ರಮಟ್ಟದ ಹೈಬ್ರೀಡ್ ಸಮ್ಮೇಳನದಲ್ಲಿ ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಬಸವರಾಜ ಡೋಣೂರ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎನ್.ಬಿ. ಪಾಟೀಲ, ಎಸ್.ಡಿ ಸೋರಗಾಂವಿ ಇತರರಿದ್ದರು.
- ಪ್ರೊ. ಬಸವರಾಜ ಡೋಣೂರ ಹೇಳಿಕೆ
- ಕೆಎಲ್‌ಇ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಹೈಬ್ರಿಡ್ ಸಮ್ಮೇಳನ
- ಇಂಗ್ಲಿಷ್ ಭಾಷೆಯ ಅತಿಯಾದ ಪ್ರಾಬಲ್ಯ ಸ್ಥಳೀಯ ಭಾಷೆಗಳ ಮೇಲೆ ಪರಿಣಾಮ ಬೀರುತ್ತಿದೆ
ಮಹಾಲಿಂಗಪುರ : ಇಂಗ್ಲಿಷ್ ಭಾಷೆಯ ಅತಿಯಾದ ಪ್ರಾಬಲ್ಯ ಸ್ಥಳೀಯ ಭಾಷೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ. ಬಸವರಾಜ ಡೋಣೂರ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾಜಿಕ ವಿಜ್ಞಾನಗಳು ಮತ್ತು ಭಾಷೆಗಳಲ್ಲಿ ಸಮಕಾಲೀನ ಚರ್ಚೆಗಳು ವಿಷಯದ ಕುರಿತು ರಾಷ್ಟ್ರಮಟ್ಟದ ಹೈಬ್ರಿಡ್ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಮಾತು ಮತ್ತು ನಡೆ ನಡುವಿನ ಅಂತರ ಹೆಚ್ಚುತ್ತಿದ್ದು, ಭಾಷೆ ಮತ್ತು ಶಬ್ದಗಳ ಅರ್ಥ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ವ್ಯಕ್ತಿಯ ಜ್ಞಾನ ಮತ್ತು ಬುದ್ಧಿಯನ್ನು ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಅಭಿವದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಬಿ. ಪಾಟೀಲ ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ವಿಜ್ಞಾನಗಳ ಮಹತ್ವ ಹೆಚ್ಚುತ್ತಿದೆ. ಈ ಕ್ಷೇತ್ರವನ್ನು ಅಭ್ಯಾಸ ಮಾಡಲು ಸಾಧನಗಳಿಗಿಂತಲೂ ಚಿಂತನೆ ಮತ್ತು ಕಲ್ಪನೆ ಮುಖ್ಯವಾಗಿದ್ದು, ದೇಶದ ಆರು ರಾಜ್ಯಗಳಿಂದ ಸುಮಾರು 140 ಸಂಶೋಧನಾ ಲೇಖನಗಳು ಸಮ್ಮೇಳನಕ್ಕೆ ಬಂದಿವೆ ಎಂದು ತಿಳಿಸಿದರು.
ಗೋವಾ ವಿಶ್ವವಿದ್ಯಾಲಯದ ಪ್ರೊ. ರಾಹುಲ್ ತ್ರಿಪಾಠಿ ಮಾತನಾಡಿ, ಸಾಮಾಜಿಕ ವಿಜ್ಞಾನಗಳ ವಿವಿಧ ಆಯಾಮಗಳ ಕುರಿತು ವಿಚಾರ ಮಂಡಿಸಿದರು. ಚರ್ಚೆಯಲ್ಲಿ ಡಾ. ಮಹೇಶ್ ಗಜಪ್ಪನವರ, ಡಾ. ಎಂ.ಎಸ್. ಮಿರ್ಜೇಕರ, ಡಾ. ಎಂ.ಎನ್. ಬೆನ್ನೂರ ಹಾಗೂ ಡಾ. ಎಸ್.ಬಿ. ತಳವಾರ ಸೇರಿ ಹಲವು ಗಣ್ಯರು ಪಾಲ್ಗೊಂಡರು. ಪ್ರೊ. ಬಸವರಾಜ ಡೋಣೂರ ಅವರನ್ನು ಸನ್ಮಾನಿಸಲಾಯಿತು.
ಟಿ.ಡಿ. ಡಾಂಗಿ, ಡಾ. ಎಸ್.ಎಸ್. ಕೋಳಿ, ಎ.ಎಂ. ಉಗಾರೆ ಉಪಸ್ಥಿತರಿದ್ದರು. ಸಮ್ಮೇಳನದ ನಿರ್ದೇಶಕಿ ಡಾ. ಎಸ್.ಡಿ. ಸೋರಗಾಂವಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಿ.ಎಂ. ಐಗಳಿ ಪರಿಚಯಿಸಿದರು. ಪೂಜಾ ಹೊಸೂರ ನಿರೂಪಿಸಿದರು.