ಬಾದಾಮಿ ತಾಲೂಕಿನ ಕಾಕನೂರ ಎಸ್‌ಐಬಿ ಬ್ಯಾಂಕ್ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಬಾಗಲಕೋಟೆ ಜಿಲ್ಲೆ ಪೊಲೀಸರು ವಾಹನ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿರುವುದು. ಎಸ್ಪಿ ಸಿದ್ಧಾರ್ಥ ಗೋಯಲ್, ಬಾದಾಮಿ ಸಿಪಿಐ ಕೆ.ಬಿ. ಬನ್ನೆ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿ ಇದ್ದಾರೆ.
- ಕಾಕನೂರಿನಲ್ಲಿ ಎಸ್‌ಬಿಐ ಕಳ್ಳತನ ಪ್ರಕರಣ
- 32 ಲಕ್ಷ ರೂ. ಚಿನ್ನಾಭರಣ, ನಗದು ವಶ
- ತೆಲಂಗಾಣದಲ್ಲೂ ಬ್ಯಾಂಕ್ ದೋಚಿರುವುದು ಬೆಳಕಿಗೆ
ಬಾಗಲಕೋಟೆ: ಬಾದಾಮಿ ತಾಲೂಕಿನ ಕಾಕನೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀಸರು ಮತ್ತಿಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಸಿದ್ಧಾರ್ಥ ಗೋಯಲ್, ಸೆ. 2ರಂದು ಕಾಕನೂರಿನಲ್ಲಿರುವ ಎಸ್‌ಬಿಐ ಶಾಖೆಗೆ 6 ಜನರ ಖದೀಮರ ತಂಡ ಕನ್ನ ಹಾಕಿತ್ತು. ಬ್ಯಾಂಕಿನ ಹಿಂದಿನ ಬಾಗಿಲು ಒಡೆದು 44 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದೀಗ ಮಹಾರಾಷ್ಟ್ರದ ಅಕ್ಷಯ ಗಜಾನನ ಅಂಬೋರೆ, ಕುನಾಲ್ ಋಷಿ ಅವರನ್ನು ಬಂಧಿಸಲಾಗಿದೆ ಎಂದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಉತ್ತರ ಪ್ರದೇಶ ಮೂಲದ ಮೊಹಮ್ಮದ ನವಾಬ್ ಹಸನ್ ಹಾಗೂ ಖಮರುಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದರು. ಇದರ ಜೊತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದ ಪೊಲೀಸರು ಬೀಸಿದ್ದ ಬಲೆಗೆ ಈಗ ಮತ್ತಿಬ್ಬರು ಬಿದ್ದಿದ್ದಾರೆ.
ಖದೀಮರ ಗ್ಯಾಂಗ್ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇರುವ ಬ್ಯಾಂಕ್‌ಗಳನ್ನು ಕನ್ನಹಾಕುವ ಗುರಿ ಇಟ್ಟುಕೊಂಡಿತ್ತು. ಹಾಗೆಯೇ ಬಾದಾಮಿ ತಾಲೂಕಿನ ಕಾಕನೂರಿನ ಶಾಖೆಯನ್ನು ಆರು ತಿಂಗಳ ಮುಂಚೆಯೇ ಪಕ್ಕಾ ಪ್ಲಾನ್ ಮಾಡಿಕೊಂಡು ಹೋಗಿತ್ತು. ಗ್ರಾಮೀಣ ಭಾಗದ ಬ್ಯಾಂಕಿಗೆ ಹೆಚ್ಚಿನ ಭದ್ರತೆ ಇಲ್ಲದಿರುವುದನ್ನು ಗಮನಿಸಿಕೊಂಡು ಶಾಖೆಗೆ ನುಗ್ಗಲು ಉಪಾಯ ಮಾಡಿಕೊಂಡಿತ್ತು.
ಶಾಖೆಗೆ ಹಿಂದೆ ಒಂದು ಬಾಗಿಲಿರುವುದನ್ನು ಗಮನಿಸಿ ಕಳ್ಳರು ಕನ್ನ ಹಾಕಿದ್ದರು. ಸಿಸಿ ಕ್ಯಾಮರಾಗಳಿಗೆ ಸ್ಪ್ರೇ ಮಾಡಿ ಯಾವುದೇ ಸಾಕ್ಷಿಗಳು ಸಿಗದಂತೆ ಯೋಜನೆ ಹಾಕಿಕೊಂಡಿದ್ದರು. ಆದರೆ, ಸುತ್ತಲಿನ 60 ಕಿ.ಮೀ. ವ್ಯಾಪ್ತಿಯಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗಮನಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಹಲವು ಬಾರಿ ಉತ್ತರ ಪ್ರದೇಶಕ್ಕೂ ಭೇಟಿ ನೀಡಿದ ನಂತರ ಆರೋಪಿಗಳು ಬಲೆಗೆ ಬಿದ್ದಿದ್ದರು. ಅದಾದ ನಂತರ ಅದರಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಈಗ ಮಹಾರಾಷ್ಟ್ರದಿಂದ ಕರೆತರಲಾಗಿದೆ. ಬಂಧಿತ ಅಕ್ಷಯ ಮತ್ತು ಕುನಾಲ್ ಋಷಿಯಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಗ್ರಾಂ ಚಿನ್ನ, 1.25 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 44 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳುವಾಗಿದ್ದು, ಈವರೆಗೆ 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ವಿವರಿಸಿದರು.
ಎಎಸ್‌ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ, ಹುನಗುಂದ ಡಿವೈಎಸ್‌ಪಿ ಸಂತೋಷ ಬನಹಟ್ಟಿ ಅವರ ಮಾರ್ಗದರ್ಶನದಲ್ಲಿ ಬಾದಾಮಿ ಸಿಪಿಐ ಕೆ.ಬಿ. ಬನ್ನೆ, ಪಿಎಸ್‌ಐಗಳಾದ ವಿಜಯಕುಮಾರ ರಾಠೋಡ, ಬಿ.ಎಂ. ರಬಕವಿ, ಎಚ್.ಕೆ. ನರಳೆ, ಸಿದ್ದಪ್ಪ ಯಡಹಳ್ಳಿ, ಎಎಸ್‌ಐ ಸಿ.ಎಂ. ಕುಂಬಾರ, ಅಶೋಕ ಚವಾಣ, ಎಂ.ಎಂ. ಸೋಲಾಪುರ, ಆನಂದ ಗೋಳಪ್ಪನವರ, ರಾಜು ಒಡೆಯರ, ಬಿ.ಎ. ವಾಲಿಕಾರ, ಆರ್.ಎಸ್. ಕರಿಗಾರ, ಸುರೇಶ ಮುತ್ತಲಗೇರಿ, ವಿ.ಎನ್. ಲಮಾಣಿ, ಶ್ರೀಶೈಲ ನಡಗೇರಿ, ಲಾಲಸಾಬ ನದ್ಾ, ರವಿ ದಾಸರ, ಪ್ರವೀಣ ಘಾಟಗೆ, ವಿಜಯ ತುಂಬದ, ಮಂಜು ಸಂಗೊಂದಿ, ಕಲ್ಲಪ್ಪ ದಂದರಗಿ, ರವಿ ಮರೆಯನ್ನವರ, ಜಿ.ಎಸ್. ಹೊಸಮನಿ, ಸಿ.ಎಂ. ಕೋಟಿ, ಬಿ.ಎಂ. ಮೊಘಲನ್ನವರ, ಮಂಜುನಾಥ ಉಪ್ಪಾರ, ಮಂಜುನಾಥ ಕುಂದರಗಿ, ಮಹಾಂತೇಶ ಹರದೊಳ್ಳಿ, ಸಿ.ಎಚ್. ಮೇತ್ರಿ, ಚಂದ್ರು ಜಟ್ಟೆಪ್ಪಗೋಳ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳ ಪತ್ತೆಗೆ ತನಿಖೆ ಮುಂದವರಿದಿದೆ ಎಂದು ತಿಳಿಸಿದ ಎಸ್‌ಪಿ ಸಿದ್ಧಾರ್ಥ ಗೋಯಲ್, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.
ತೆಲಂಗಾಣದ ಪ್ರಕರಣವೂ ಬೆಳಕಿಗೆ
ಬಾಗಲಕೋಟೆ ಪೊಲೀಸರ ಕಾರ್ಯಾಚರಣೆ ವೇಳೆ ತೆಲಂಗಾಣದ ರಾಯಪರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಸ್‌ಬಿಐ ಶಾಖೆಗೂ ಈ ತಂಡ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಅಲ್ಲಿನ ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರೂ ತೀವ್ರ ಶೋಧದಲ್ಲಿದ್ದರು. ಆದರೆ, ಬಾದಾಮಿ ತಾಲೂಕಿನ ಕಾಕನೂರು ಶಾಖೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ಕೈಗೊಂಡ ಬಾಗಲಕೋಟೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಖದೀಮರು ತೆಲಂಗಾಣದಲ್ಲೂ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಅಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಲಕ್ಷ ರೂ. ಬೆಲೆ ಬಾಳುವ 244.20 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಗೋಯಲ್ ತಿಳಿಸಿದರು.