ಇಳಕಲ್ಲ ಸಮೀಪದ ಹನಮನಾಳ ಹತ್ತಿರದ ಪಾಳುಬಿದ್ದ ಗ್ರಾನೈಟ್ ಕ್ವಾರಿಯಲ್ಲಿ ಬಾಲಕರ ಮೃತದೇಹ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳ.
ಬಾಗಲಕೋಟೆ: ಬಿಸಿಲಿನ ಬೇಗೆಯನ್ನು ತಪ್ಪಿಸಿಕೊಳ್ಳಲು ಗೆಳೆಯರೊಂದಿಗೆ ಗ್ರಾನೈಟ್ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕರಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ಇಳಕಲ್ಲ ನಗರದ ಹೊರವಲಯದ ಹನುಮನಾಳ ಸಮೀಪದಲ್ಲಿ ನಡೆದಿದೆ.
ಇಳಕಲ್ಲ ನಗರದ ಅಲಂಪೇಟೆಯ ನಿವಾಸಿಗಳಾದ ವಿಜಯಮಹಾಂತೇಶ ನಾಗಪ್ಪ ವಾಲಿಕಾರ (೧೬), ವಿನಾಯಕ ಭೀಮಣ್ಣ ಗೊಲ್ಲರ (೧೨) ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದೆ.
ನಗರದ ಹೊರವಲಯದಲ್ಲಿ ಇರುವ ಬಂದ್ ಆಗಿರುವ ಗ್ರಾನೈಟ್ ಕ್ವಾರಿಯಲ್ಲಿ ಸಂಗ್ರಹವಾಗಿದ್ದ ನೀರಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ. ಒಟ್ಟು ಮೂವರು ಬಾಲಕರು ತೆರಳಿದ್ದು, ಅವರಿಗೆ ಸರಿಯಾಗಿ ಈಜಲು ಬರುತ್ತಿಲ್ಲ ಎನ್ನಲಾಗುತ್ತಿದೆ. ಕ್ವಾರಿ ಆಳವಾಗಿದ್ದರಿಂದ ಬಾಲಕರು ನೀರು ಪಾಲು ಆಗಿದ್ದಾರೆ. ಈ ವೇಳೆ ಓರ್ವ ಬಾಲಕನನ್ನು ಕ್ವಾರಿಯ ಸಮೀಪದಲ್ಲಿ ಇದ್ದ ಯಲ್ಲಪ್ಪ ಹುಬ್ಬಳ್ಳಿ ಎನ್ನುವ ಬಾಲಕ ರಕ್ಷಣೆ ಮಾಡಿದ್ದಾನೆ. ಅಷ್ಟರಲ್ಲಿ ಇನ್ನಿಬ್ಬರು ಬಾಲಕರು ಆಳದಲ್ಲಿ ಮುಳುಗಿದ್ದರಿಂದ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.
ಬಾಲಕರು ನೀರಲ್ಲಿ ಮುಳುಗಿರುವ ವಿಷಯ ತಿಳಿದು ಸ್ಥಳಕ್ಕೆ ಇಳಕಲ್ಲ ಅಗ್ನಿಶಾಮಕ ಸಿಬ್ಬಂದಿ ತೆರಳಿ ಸುಮಾರು ೪ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಇಬ್ಬರು ಬಾಲಕರ ಮೃತದೇಹಗಳನ್ನು ಹೊರಗಡೆ ತೆಗೆದಿದ್ದಾರೆ. ಬಾಲಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಳಕಲ್ಲ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.