ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಜಮೀನಿನಲ್ಲಿ ಅರಿಶಿಣ ಹಾಗೂ ವಿಳ್ಯದೆಲೆ ಬೆಳೆಗಳಿಗೆ ಶಂಖದ ಹುಳುಗಳು ಹಾನಿ ಮಾಡುತ್ತಿರುವುದು. 
ಬಾಗಲಕೋಟೆ

ಅರಿಶಿಣ, ವೀಳ್ಯದೆಲೆಗೆ ಶಂಕದ ಹುಳುಗಳ ಕಾಟ..!

ಪ್ರಮುಖ ಮುಖ್ಯಾಂಶಗಳು

  • ಜಗದಾಳ ನಾವಲಗಿ ಗ್ರಾಮಗಳಲ್ಲಿ ದಾಳಿ
  • ಲಕ್ಷಾಂತರ ರೂ. ನಷ್ಟದ ಆತಂಕ
  • ತುರ್ತು ಕ್ರಮಕ್ಕೆ ಬೆಳೆಗಾರರ ಆಗ್ರಹ
ರಬಕವಿ/ಬನಹಟ್ಟಿ:

ತಾಲೂಕಿನ ಜಗದಾಳ ಹಾಗೂ ನಾವಲಗಿ ಗ್ರಾಮಗಳಲ್ಲಿ ಅರಿಶಿಣ ಮತ್ತು ವೀಳ್ಯದೆಲೆ ಬೆಳೆಗಳಿಗೆ ಶಂಖದ ಹುಳುಗಳ ಕಾಟ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.

ಮುಂಗಾರು ಹಂಗಾಮಿನಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಹುಳುಗಳ ದಾಳಿ ಭಾರೀ ಆರ್ಥಿಕ ಹೊಡೆತ ನೀಡಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿನ ವಾಣಿಜ್ಯ ಬೆಳೆಗಳು ಹಾನಿಗೊಳಗಾಗುತ್ತಿವೆ.
ರಾತ್ರಿ ವೇಳೆಯಲ್ಲಿ ಹೆಚ್ಚಿನ ಚಟುವಟಿಕೆ ನಡೆಸುವ ಶಂಖದ ಹುಳುಗಳು ಬೆಳೆಗಳ ಎಲೆಗಳನ್ನು ಸಂಪೂರ್ಣವಾಗಿ ತಿಂದು ಹಾಕುವುದರಿಂದ ಬೆಳವಣಿಗೆ ಕುಂಠಿತವಾಗುತ್ತಿದೆ. ಕೆಲ ತೋಟಗಳಲ್ಲಿ ಒಂದೇ ರಾತ್ರಿಯಲ್ಲಿ ಎಕರೆಗಟ್ಟಲೆ ಬೆಳೆ ಹಾನಿಯಾಗಿರುವುದಾಗಿ ರೈತರು ಹೇಳುತ್ತಿದ್ದಾರೆ. ಇದರಿಂದ ಈಗಾಗಲೇ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿರುವ ರೈತರು ಬೆಳೆ ಉಳಿಸಿಕೊಳ್ಳುವ ಚಿಂತೆಯಲ್ಲಿ ಮುಳುಗಿದ್ದಾರೆ.
ಜಗದಾಳ ಮತ್ತು ನಾವಲಗಿ ಭಾಗದಲ್ಲಿ ಅರಿಶಿಣ ಹಾಗೂ ವೀಳ್ಯದೆಲೆ ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು, ಈ ಬೆಳೆಗಳ ಮೇಲೆಯೇ ಅನೇಕ ಕುಟುಂಬಗಳ ಜೀವನಾಧಾರ ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಂಖದ ಹುಳುಗಳ ಪ್ರಮಾಣ ಹೆಚ್ಚಾದ ಪರಿಣಾಮ, ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ.
ರೈತರು ವಿವಿಧ ಕೀಟನಾಶಕಗಳನ್ನು ಬಳಸಿದರೂ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ರಾತ್ರಿ ವೇಳೆಯಲ್ಲಿ ತೋಟಗಳಿಗೆ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳೆ ನಷ್ಟದ ಸಮೀಕ್ಷೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವ ಜೊತೆಗೆ ತಜ್ಞರ ತಂಡವನ್ನು ಗ್ರಾಮಗಳಿಗೆ ಕಳುಹಿಸಿ ಶಾಶ್ವತ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕೃಷಿ ತಜ್ಞರ ಅಭಿಪ್ರಾಯದಂತೆ, ಶಂಖದ ಹುಳುಗಳ ನಿಯಂತ್ರಣಕ್ಕೆ ತಕ್ಷಣ ಸಮಗ್ರ ಕ್ರಮ ಕೈಗೊಳ್ಳದಿದ್ದರೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದ್ದು, ರೈತರ ಆರ್ಥಿಕ ಸ್ಥಿತಿಗೂ ದೊಡ್ಡ ಹೊಡೆತ ಬೀಳಲಿದೆ ಎಂದು ತಿಳಿದು ಬಂದಿದೆ.

ವಿಷದ ಆಮಿಷವೇ ಪರಿಣಾಮಕಾರಿ ನಿಯಂತ್ರಣ

ಶಂಖದ ಹುಳುಗಳ ನಿಯಂತ್ರಣಕ್ಕೆ ವೀಳ್ಯದೆಲೆ ಅಥವಾ ಅರಿಶಿಣದ ಎಲೆಗಳ ಮೇಲೆ ನೇರವಾಗಿ ರಾಸಾಯನಿಕ ಸಿಂಪಡಿಸುವುದಕ್ಕಿಂತ ನೆಲದ ಮೇಲೆ ವಿಷದ ಆಮಿಷ ಇಡುವ ವಿಧಾನ ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ. ವಿಶೇಷವಾಗಿ ವೀಳ್ಯದೆಲೆಯನ್ನು ನೇರವಾಗಿ ಆಹಾರವಾಗಿ ಬಳಸುವ ಕಾರಣ ಎಲೆಗಳ ಮೇಲೆ ತೀವ್ರ ರಾಸಾಯನಿಕಗಳ ಬಳಕೆ ತಪ್ಪಿಸಬೇಕು ಎಂದು ಜಿಲ್ಲಾ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಪಲ್ಲವಿ ಎಚ್. ಎಂ. ಸಲಹೆ ನೀಡಿದ್ದಾರೆ.
ಮೆಟಾಲ್ಡಿಹೈಡ್ 2.5% ಪೆಲೆಟ್ಸ್ (ಸ್ನೇಲ್‌ಕಿಲ್) ಗುಳಿಗೆಗಳನ್ನು ಸಂಜೆ ವೇಳೆಯಲ್ಲಿ ಅರಿಶಿಣ ಗಿಡಗಳ ಬುಡದಲ್ಲಿ ಹಾಗೂ ವೀಳ್ಯದೆಲೆ ಸಾಲುಗಳ ಮಧ್ಯೆ ತೇವಾಂಶವಿರುವ ಸ್ಥಳಗಳಲ್ಲಿ ಉದುರಿಸಿದರೆ, ಹುಳುಗಳು ಅವುಗಳನ್ನು ತಿಂದು ಗಿಡಗಳನ್ನು ಹತ್ತುವ ಮುನ್ನವೇ ನಾಶವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
"

ಶಂಖದ ಹುಳುಗಳ ದಾಳಿಯಿಂದ ಅರಿಶಿಣ ಹಾಗೂ ವಿಳ್ಯದೆಲೆ ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದೆ. ಇತ್ತೀಚೆಗೆ ಕಾಟ ಸ್ವಲ್ಪ ಕಡಿಮೆಯಾಗಿದ್ದರೂ ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಷಿ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳ ಪರಿಶೀಲನೆ ನಡೆಸಿ, ಪರಿಣಾಮಕಾರಿ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಬೇಕು.
- ಸದಾಶಿವ ಬಂಗಿ, ಜಗದಾಳ ಗ್ರಾಮದ ರೈತ