ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದಲ್ಲಿ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಕುಬಕಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು. ಗಣೇಶಲಿಂಗ ಶ್ರೀಗಳು, ನಿತ್ಯಾನಂದ ಶ್ರೀಗಳು, ಹರ್ಷಾನಂದ ಶ್ರೀಗಳು ಇದ್ದರು.
- ನಿತ್ಯಾನಂದ ಮಹಾಸ್ವಾಮಿಗಳ ಅಭಿಮತ
- ನಿನ್ನನ್ನು ನೀನು ಮೊದಲು ಅರಿ
ಜಮಖಂಡಿ: ಸತ್ಸಂಗ, ಸಜ್ಜನರ ಸಂಗ ಹಾಗೂ ಸತ್ಯ ನಿಷ್ಠ ಕಾಯಕದ ಮೂಲಕ ಬದುಕಿದರೆ ಪ್ರಪಂಚದಲ್ಲಿದ್ದರೂ ಪಾರಮಾರ್ಥದ ಅನುಭವ ಸಾಧ್ಯ. ಪ್ರಪಂಚ ಮತ್ತು ಪಾರಮಾರ್ಥ ಒಂದೇ ನಾಣ್ಯದ ಎರಡು ಮುಖಗಳಂತೆ ಅವಿಭಾಜ್ಯವೆಂದು ಮುಧೋಳ ತಾಲೂಕಿನ ರೂಗಿ ಗ್ರಾಮದ ಅಡವಿ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದಲ್ಲಿ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮೊದಲು ನಿನ್ನನ್ನು ನೀನು ತಿಳಿದುಕೊಳ್ಳಬೇಕು. ಸ್ವತಃ ತಿದ್ದಿಕೊಂಡರೆ ಜಗತ್ತಿನ ಒಬ್ಬರನ್ನು ತಿದ್ದಿದ ಪುಣ್ಯ ಲಭಿಸುತ್ತದೆ. ದಿನದ ಆರಂಭವನ್ನು ಭಗವಂತನ ಸ್ಮರಣೆಯಿಂದ ಹಾಗೂ ಅಂತ್ಯವನ್ನು ಗುರುವಿಗೆ ಕೃತಜ್ಞತೆಯ ನಮಸ್ಕಾರದಿಂದ ಮಾಡಬೇಕು ಎಂದರು.
ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ಅಧ್ಯಾತ್ಮದ ಕೊರತೆಯಿಂದ ಕುಟುಂಬಗಳಲ್ಲಿ ಅಸ್ಥಿರತೆ ಹೆಚ್ಚುತ್ತಿದೆ. ಕನಿಷ್ಠ ಸತಿ-ಪತಿಗಳಲ್ಲಿ ಒಬ್ಬರಾದರೂ ಅಧ್ಯಾತ್ಮ ಜ್ಞಾನ ಹೊಂದಿದರೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.
ನಿಂಬಾಳ ಗುರುದೇವಾಶ್ರಮದ ಗಣೇಶಲಿಂಗ ಮಹಾಸ್ವಾಮಿಗಳು ಸೇರಿ ಮತ್ತಿತರರು ಆಶೀರ್ವಚನ ನೀಡಿದರು. ಋಷಿಕೇಶದ ಸ್ವರ್ಗಾಶ್ರಮದ ಗಂಗಾನಂದ ಮಹಾರಾಜರು ಹಾಗೂ ಸಿದ್ಧಾಪುರ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಸಾನ್ನಿಧ್ಯ ವಹಿಸಿದ್ದರು.
ನಿರ್ಮಾಣ ಹಂತದಲ್ಲಿರುವ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಮಂದಿರಕ್ಕೆ 1 ಲಕ್ಷ ರೂ.ಗಳ ದೇಣಿಗೆ ನೀಡಿದ ಹಾಗೂ ಸತ್ಸಂಗದ ಮಹಾಪ್ರಸಾದದ ದಾಸೋಹ ಸೇವೆಗೈದ ವಿಮಲಾ ಸಂಗಮೇಶ ಕುಬಕಡ್ಡಿ ದಂಪತಿಯನ್ನು ಆಶ್ರಮದ ಪರವಾಗಿ ಸನ್ಮಾನಿಸಲಾಯಿತು. ಸಂಗೀತ ಸೇವೆಯನ್ನು ಗುರುಬಸಗೌಡ ಪಾಟೀಲ ಹಾಗೂ ತಂಡ ನಿರ್ವಹಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.