ಬಾಗಲಕೋಟೆ ಉಪ ಚುನಾವಣೆ ಮತ ಎಣಿಕೆಗಾಗಿ ಮಾಡಿಕೊಂಡಿರುವ ಸಿದ್ಧತೆ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಂಗಪ್ಪ ಮಾಹಿತಿ ನೀಡಿದರು. ಎಸ್ಪಿ ಸಿದ್ಧಾರ್ಥ ಗೋಯಲ್, ಎಡಿಸಿ ಅಶೋಕ ತೇಲಿ, ಎಸಿ ಸಂತೋಷ ಜಗಲಾಸರ್ ಇದ್ದರು. 
ಬಾಗಲಕೋಟೆ

ನಾಳೆ ಮತ ಎಣಿಕೆಗೆ ತೋವಿವಿ ಸಂಪೂರ್ಣ ಸಜ್ಜು

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ -ಫೋ ನ್ ನಿರ್ಬಂಧ
  • ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭ
  • ಮಧ್ಯಾಹ್ನ ಹೊತ್ತಿಗೆ -ಫ ಲಿತಾಂಶ ಪ್ರಕಟ ನಿರೀಕ್ಷೆ
  • ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಮಾಹಿತಿ
  • ಎಣಿಕೆ ಕಾರ್ಯಕ್ಕೆ 63 ಸಿಬ್ಬಂದಿ ನಿಯೋಜನೆ
  • ಬೆಳಗ್ಗೆ 7 ಗಂಟೆಗೆ ಭದ್ರತಾ ಕೊಠಡಿ ಓಪನ್
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮೇ 4ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗೆ ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಅಂದು ಬೆಳಗ್ಗೆ 7 ಗಂಟೆಗೆ ಹಾಜರಿರಲು ತಿಳಿಸಲಾಗಿದೆ. ಭದ್ರತಾ ಕೊಠಡಿಯನ್ನು ಬೆಳಗ್ಗೆ 7 ಗಂಟೆಗೆ ಚುನಾವಣಾ ವೀಕ್ಷಕರ, ಅಭ್ಯರ್ಥಿಗಳ, ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುತ್ತಿದೆ ಎಂದರು.
ಇವಿಎಂ ಮತ ಎಣಿಕೆ ಕಾರ್ಯಕ್ಕಾಗಿ ನೆಲ ಮಹಡಿಯ ರೂ. ನಂ. 4ರಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತ ಪತ್ರಗಳ ಎಣಿಕೆಗಾಗಿ ನೆಲ ಮಹಡಿಯ 9ರ ಕೊಠಡಿಯಲ್ಲಿ ಒಂದು ಟೇಬಲ್ ಹಾಗೂ ಇಟಿಪಿಬಿಎಸ್ ಸ್ಕ್ಯಾನಿಂಗ್‌ಕ್ಕಾಗಿ ಕೊಠಡಿ ಸಂ. 9ರಲ್ಲಿ ಒಂದು ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಓರ್ವ ಸಹಾಯಕ ಚುನಾವಣಾಧಿಕಾರಿಗಳು ಇರುತ್ತಾರೆ ಎಂದು ತಿಳಿಸಿದರು.
ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಸಲುವಾಗಿ ಒಂದು ಟೇಬಲ್ ಮಾಡಲಾಗಿದ್ದು, ಓರ್ವ ಸ್ಕ್ಯಾನಿಂಗ್ ಮೇಲ್ವಿಚಾರಕರು, ಓರ್ವ ಅಸಿಸ್ಟಂಟ್ ಹಾಗೂ ಇಬ್ಬರು ಸಹಾಯಕ ಚುನಾವಣಾಽಕಾರಿಗಳನ್ನು ನೇಮಿಸಲಾಗಿದೆ. ಕಾಯ್ದಿಟ್ಟ ಸಿಬ್ಬಂದಿ ಸೇರಿ ಎಣಿಕೆ ಕಾರ್ಯಕ್ಕೆ ಒಟ್ಟು 63 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸುತ್ತುವಾರು ಮತ ಎಣಿಕೆಯಾದ ವಿವರವನ್ನು ಪಬ್ಲಿಕ್ ಅಡ್ರೇಸ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಭ್ಯರ್ಥಿ, ಅಭ್ಯರ್ಥಿ ಏಜೆಂಟರಿಗೆ ಮತ ಎಣಿಕೆ ಪೂರ್ವ ದಿಕ್ಕಿನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಏಜೆಂಟರಿಗೆ ಮುಖ್ಯ ದ್ವಾರದಲ್ಲಿ ಪ್ರವೇಶ ಇರುವುದಿಲ್ಲ. ಸದರಿ ವಾಹನಗಳಿಗೆ ಮುಖ್ಯ ದ್ವಾರದ 200 ಮೀಟರ್ ಮುಂಚಿತವಾಗಿ ಇರುವ ಜಿಲ್ಲಾ ಪಶು ಸಂಗೋಪನಾ ಆಸ್ಪತ್ರೆ ಎದುರುಗಡೆ ಹೋಗುವ ರಸ್ತೆ ಮುಖಾಂತರ ಮತ ಎಣಿಕೆ ಕೇಂದ್ರದಿಂದ ಸುಮಾರು 200 ಮೀಟರ್ ಅಂತರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತ ಎಣಿಕೆ ಸಿಬ್ಬಂದಿಗೆ ಹಾಗೂ ಮಾಧ್ಯಮದವರಿಗೆ ಮಾತ್ರ ಮುಖ್ಯ ದ್ವಾರದಿಂದ ಪ್ರವೇಶವಿರುತ್ತದೆ. ಎಣಿಕೆ ಕೇಂದ್ರದಲ್ಲಿ ಮೊಬೈಲ್ -ಫೋನ್ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್‌ ವಾಸುದೇವ ಸ್ವಾಮಿ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯೋತ್ಸವಕ್ಕೆ ಅವಕಾಶ ಇಲ್ಲ

ಉಪ -ಫಲಿತಾಂಶದ ಬಳಿಕ ಕ್ಷೇತ್ರದಾದ್ಯಂತ ಮೇ 4ರಂದು ಗೆದ್ದ ಅಭ್ಯರ್ಥಿ ಬೆಂಬಲಿಗರು, ಕಾರ್ಯಕರ್ತರು ಧ್ವನಿವರ್ಧಕ ಬಳಕೆ ಮಾಡುವುದು, ಮೆರವಣಿಗೆ, ಘೋಷಣೆ, ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಿಸಲು ಅವಕಾಶ ಇರುವುದಿಲ್ಲ. ಯಾವುದೇ ಗಲಾಟೆ, ಘರ್ಷಣೆ ಉಂಟಾಗದಂತೆ ಹಾಗೂ ಸಾರ್ವಜನಿಕ ಶಾಂತತೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಂದು ಬೆಳಗ್ಗೆ 6 ರಿಂದ ಮೇ 5 ರ ಬೆಳಗ್ಗೆ 6 ಗಂಟೆ ವರೆಗೂ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ ಅನ್ವಯ 163ನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಮೂರು ಹಂತದಲ್ಲಿ ಭದ್ರತೆ

ಮತ ಎಣಿಕೆ ನಡೆಯುವ ತೋಟಗಾರಿಕೆ ವಿವಿಯಲ್ಲಿ ಮೂರು ಹಂತದ ಭದ್ರತೆ ನೀಡಲಾಗಿದೆ. ಮೊದಲು ಸಿಎಪಿಎಫ್‌ ಸಿಬ್ಬಂದಿ, ಎರಡನೇ ಹಂತದಲ್ಲಿ ಕೆಎಸ್‌ಆರ್‌ಪಿ ಹಾಗೂ 3ನೇ ಹಂತದಲ್ಲಿ ಸ್ಥಳೀಯ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. ಫಲಿತಾಂಶದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಏಜಂಟರಿಗೆ ನೀಡಿರುವ ಪಾಸ್‌ಗಳಲ್ಲಿ ಕ್ಯೂಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕ ಒಳಗಡೆ ಬಿಡಲಾಗುವುದು. ಪ್ರತಿಯೊಬ್ಬರಿಗೂ ಮೂರು ಹಂತದಲ್ಲಿ ಚೆಕ್ ಮಾಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದರು.

ಶೇ. 68.62ರಷ್ಟು ಮತದಾನ

ಬಾಗಲಕೋಟೆ ಉಪ ಚುನಾವಣೆಯಲ್ಲಿ ಶೇ. 68.62ರಷ್ಟು ಮತದಾನ ಆಗಿದೆ. ಕ್ಷೇತ್ರದಲ್ಲಿ ಒಟ್ಟು 1,78,273 ಜನರು ಹಕ್ಕು ಚಲಾಯಿಸಿದ್ದು, ಈ ಪೈಕಿ 90,024 ಮಹಿಳೆಯರು ಹಾಗೂ 88,241 ಪುರುಷ ಮತದಾರರು ಮತದಾನ ಮಾಡಿದ್ದಾರೆ. ಇದರ ಜೊತೆಗೆ 270 ಪೋಸ್ಟಲ್ ಮತಗಳು ಬಂದಿವೆ. 120 ಇಟಿಪಿ ಇದ್ದು, ಮೇ 4 ರಂದು ಬೆಳಗ್ಗೆ 8 ಗಂಟೆ ವರೆಗೂ ಬರುವ ಅಂಚೆ ಮತಗಳನ್ನು ಪರಿಗಣಿಸಲಾಗುತ್ತದೆ. ಹಾಗೆಯೇ ಮನೆ ಮನೆಗೆ ತೆರಳಿ ಮತ ಹಾಕಿಸುವ ಪ್ರಕ್ರಿಯೆಯಲ್ಲಿ ಕ್ಷೇತ್ರದಲ್ಲಿ 273 ಮತದಾರರು ಮತದಾನ ಮಾಡಿದ್ದಾರೆ. ಮೊದಲು ಪೋಸ್ಟಲ್ ಮತ ಎಣಿಕೆ ನಡೆಯಲಿದ್ದು, ಬಳಿಕ ಇವಿಎಂ ಯಂತ್ರಗಳ ಮತ ಎಣಿಕೆ ನಡೆಯಲಿದೆ. ಹಾಗೆಯೇ ಮತ ಎಣಿಕೆ ನಡೆಯುವ ಪ್ರತಿ ಟೇಬಲ್‌ಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ವಿವರಿಸಿದರು.
"

ಮೇ 4ರ ಬೆಳಗ್ಗೆ 6 ಗಂಟೆಯಿAದ ಮಧ್ಯರಾತ್ರಿ 12 ಗಂಟೆ ವರೆಗೂ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ಹಾಗೂ ಕ್ಷೇತ್ರದ 10 ಕಿ.ಮೀ., ವ್ಯಾಪ್ತಿಯಲ್ಲಿ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಡಾಬಾ ಮತ್ತು ಇನ್ನೀತರ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

— | ಸಂಗಪ್ಪ, ಜಿಲ್ಲಾ ಚುನಾವಣಾಧಿಕಾರಿ, ಬಾಗಲಕೋಟೆ.