ಅಯೋಧ್ಯೆ ರಾಮ ಮಂದಿರದ ಹುಂಡಿ ಕಳುವು ಪ್ರಕರಣ ಖಂಡಿಸಿ ಬಾಗಲಕೋಟೆ ನಗರದಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜಿನ ಮೆರವಣಿಗೆ ನಡೆಸಿದರು.
- ರಾಮ ಮಂದಿರ
- ಹುಂಡಿ ಕಳವು ಪ್ರಕರಣ ಖಂಡನೆ
ಬಾಗಲಕೋಟೆ : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದಿರುವ ಹುಂಡಿ ಕಳವು ಪ್ರಕರಣವನ್ನು ಖಂಡಿಸಿ, ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ಆಗ್ರಹಿಸಿ ಬುಧವಾರ ಸಂಜೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ನಗರದ ವಲ್ಲಭಭಾಯಿ ವೃತ್ತದಿಂದ ಮೇರವಣಿಗೆ ಆರಂಭಿಸಿ, ಬಸವೇಶ್ವರ ವೃತ್ತಕ್ಕೆ ಬಂದು ಅಲ್ಲಿ ಸಭೆ ನಡೆಸಿದರು. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಕಳುವು ಮಾಡಿರುವುದು ದೇಶದ ಕೋಟ್ಯಂತರ ರಾಮ ಭಕ್ತರ ನಂಬಿಕೆ ಮತ್ತು ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದಾರೆ. ಇದೊಂದು ಅತ್ಯಂತ ಗಂಭೀರ ಘಟನೆಯಾಗಿದೆ. ನಿತ್ಯ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂಥ ಘಟನೆ ಬಳಿಕ ದೇಶದ ಜನರು ಮತ್ತು ರಾಮಭಕ್ತರ ಆತಂಕಕ್ಕೆ ಸ್ಪಷ್ಟ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.
ರಾಮ ಮಂದಿರದ ಹುಂಡಿಗೆ ಕನ್ನ ಹಾಕಿರುವ ಘಟನೆಯ ಸಂಪೂರ್ಣ ಸತ್ಯಾಂಶವನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸಬೇಕು. ಭಕ್ತರು ನೀಡಿರುವ ಕಾಣಿಕೆ ದುರುಪಯೋಗ ಆಗಬಾರದು. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಽಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಮ ಭಕ್ತರು ಮತ್ತು ದೇಶದ ಜನರು ಹುಂಡಿ ಕಳ್ಳತನದ ಬಗ್ಗೆ ಕೇಂದ್ರ ಸರ್ಕಾರದಿಂದ ಉತ್ತರ ನಿರೀಕ್ಷಿಸುತ್ತಿದ್ದಾರೆ. ರಾಮ ಮಂದಿರದ ಪಾವಿತ್ರ‍್ಯ ಹಾಗೂ ಭಕ್ತರ ನಂಬಿಕೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೇವಲ ರಾಜಕೀಯ ಘೋಷಣೆಗಳನ್ನು ಬಿಟ್ಟು ದೇವಾಲಯಗಳ ಸುರಕ್ಷತೆ ಆದ್ಯತೆ ನೀಡಬೇಕು. ದೇವಾಲಯದ ಭದ್ರತೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಪಂಜಿನ ಮೆರವಣಿಗೆಯಲ್ಲಿ ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಪಕ್ಷದ ಮುಖಂಡರಾದ ನಾಗರಾಜ ಹದ್ಲಿ, ಎನ್.ಬಿ. ಗಸ್ತಿ, ರಾಜು ಮನ್ನಿಕೇರಿ, ಹನಮಂತ ರಾಕುಂಪಿ, ವೈ.ಸಿ. ಕಾಂಬಳೆ, ವಿಜಯ ತಿಪ್ಪರೆಡ್ಡಿ, ರೇಣುಕಾ ನ್ಯಾಮಗೌಡ, ಲಕ್ಷ್ಮಿ ಚವಾಣ್ ಗುಣವಂತಿ ನಿಡೋಣಿ, ವಿಜಯ ಮುಳ್ಳೂರ, ಸುನೀಲ ಬಾಲಗಾಂವಿ, ಜಟ್ಟೆಪ್ಪ ಮಾದಾಪುರ ಮತ್ತಿತರರು ಇದ್ದರು.