ತುಳಸಿಗೇರಿ ದೇವಸ್ಥಾನದಲ್ಲಿ ನಡೆದ ಹೊಂಡದ ಪೂಜೆ.
- ಹೊಂಡದ ಪೂಜೆ
- ಕಲಶಾರೋಹಣದೊಂದಿಗೆ ಚಾಲನೆ
ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯಲ್ಲಿ ಏ. 27ರಂದು ಮಾರುತೇಶ್ವರ ಓಕುಳಿ ನಡೆಯಲಿದೆ. ಕಳೆದ ಶುಕ್ರವಾರ ಸಂಜೆ ನೀರಬೂದಿಹಾಳದ ದೇಸಾಯಿಯವರ ಮನೆಯಿಂದ ಬಂದ ಪಲ್ಲಕ್ಕಿಯನ್ನು ಬರಮಾಡಿಕೊಂಡು ದೇವಸ್ಥಾನದ ಆವರಣದಲ್ಲಿ ಹಾಲಗಂಬ ಮತ್ತು ಒಳಕಲ್ಲು ಪೂಜೆ ನೆರವೇರಿಸುವುದರೊಂದಿಗೆ ಆಚರಣೆಗೆ ಶ್ರದ್ಧಾಭಕ್ತಿಯೊಂದಿಗೆ ಚಾಲನೆ ನೀಡಲಾಯಿತು.
ಶನಿವಾರ ಬೆಳಗ್ಗೆ ದೇವಾಲಯದ ಎಲ್ಲಾ ಶಿಖರಗಳಿಗೆ ಕಲಶಾರೋಹಣ ಮಾಡಲಾಯಿತು. ಕೃಷ್ಣಾ ನದಿ ನೀರನ್ನು ಹಾಕಿ ಓಕುಳಿ ಹೊಂಡದ ಪೂಜೆ, ಸಂಜೆ ಹಂದರ ಪೂಜೆ ಕಾರ್ಯಕ್ರಮಗಳು ಜರುಗಿದವು.
ಇಂದು ಹರಿಸೇವೆ : ಏ. 26ರಂದು `ಹರಿಸೇವೆ' ಆಚರಣೆ ಮಾರುತೇಶ್ವರ ದೇವಸ್ಥಾನದಲ್ಲಿ ನೆರವೇರಲಿದೆ. ಭಾನುವಾರ ಬೆಳಗಿನ ಜಾವದಿಂದಲೇ ಅಂದಾಜು ಎಂಟು ಕ್ವಿಂಟ್ವಾಲ್‌ಗೂ ಹೆಚ್ಚು ಬೇಳೆ ಕಡುಬುಗಳನ್ನು ಊರಿನ ಮಹಿಳೆಯರು ಮಾಡಲಾರಂಭಿಸುವುದು, ಬಾಲರೆಡ್ಡಿ ಮನೆತನದವರು ಐದು ವಿಶೇಷ ಕಡುಬು ತಯಾರಿಸುವುದು ಇದರ ವಿಶೇಷ.
ಸಂಜೆ 5ಕ್ಕೆ ಐದು ಜನ ಗಂಡು ಮುತ್ತೈದೆಯರಿಗೆ ಉಡಿ ತುಂಬುವುದು, ಗೋಪಾಳ ತುಂಬಿಸುವುದು, ಬೃಹತ್ ಕಡುಬುಗಳ ನೈವೇದ್ಯೆ ಮುಂತಾದ ಆಚರಣೆಗಳು ನಡೆಯಲಿವೆ.
ಈ ಬಾರಿಯ ಸೇವೆ: ಏ. 27ರಂದು ಸಂಜೆ ಓಕುಳಿ ನಡೆಯಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಡೀ ಊರಿನ ಜನರೆಲ್ಲಾ ಸೇರಿ ಓಕುಳಿಯ ಸಂಪೂರ್ಣ ಸೇವೆ ಮಾಡಲಿದ್ದು, ಇನ್ನುಳಿದ ಎರಡುವರ್ಷ ಭಕ್ತರೊರ್ವರು ಈ ಸೇವೆ ಎಲ್ಲಾ ಖರ್ಚು ವೆಚ್ಚಗಳ ಜವಾಬ್ದಾರಿಯ ಸೇವೆ ಮಾಡುತ್ತಾರೆ. ಅದರಂತೆ ಈ ಬಾರಿ ಗ್ರಾಮದ ಶಿವಪ್ಪ ಕೆಂಗಲಗುತ್ತಿ ಕುಟುಂಬದವರು ಓಕುಳಿಯ ಸಂಪೂರ್ಣ ಸೇವೆಯನ್ನು ಮಾಡಲಿದ್ದಾರೆ.