ಕಲಾದಗಿಯ ಗ್ರಾಮದಲ್ಲಿರುವ ಪಂಚಗ್ರಹ ಸಂಸ್ಥಾನ ಹಿರೇಮಠದ ಪೂಜ್ಯದ್ವಯರಾದ ಲಿಂ. ಪಡದಪ್ಪಯ್ಯ ಮಹಾಸ್ವಾಮಿಗಳ ಗದ್ದುಗೆಯ ಎದುರು ಗಂಗಾಧರ ಶ್ರೀಗಳು ಮತ್ತು ಭಕ್ತರು. ಕಲಾದಗಿಯ ಗ್ರಾಮದಲ್ಲಿರುವ ಪಂಚಗ್ರಹ ಸಂಸ್ಥಾನ ಹಿರೇಮಠದ ಪೂಜ್ಯದ್ವಯರಾದ ಲಿಂ. ಪಡದಪ್ಪಯ್ಯ ಮಹಾಸ್ವಾಮಿಗಳ ಗದ್ದುಗೆಯ ಎದುರು ಗಂಗಾಧರ ಶ್ರೀಗಳು ಮತ್ತು ಭಕ್ತರು.
ಬಾಗಲಕೋಟೆ

ಪೂಜ್ಯದ್ವಯರ ಪುಣ್ಯಾರಾಧನೆ ಅದ್ದೂರಿ

ಕಲಾದಗಿ: ಗ್ರಾಮದಲ್ಲಿರುವ ಪಂಚಗ್ರಹ ಸಂಸ್ಥಾನ ಹಿರೇಮಠದ ಪೂಜ್ಯದ್ವಯರಾದ ಲಿಂ. ಪಡದಪ್ಪಯ್ಯ ಮಹಾಸ್ವಾಮಿಗಳ 51ನೇ ಹಾಗೂ ಲಿಂ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 11ನೇ ಪುಣ್ಯಾರಾಧನೆ ಸೋಮವಾರ ಶ್ರೀಮಠದಲ್ಲಿ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.

ಈ ನಿಮಿತ್ತ ಬೆಳಗ್ಗೆ ಇಬ್ಬರು ಪೂಜ್ಯರ ಕತೃ ಗದ್ದುಗಳಿಗೆ ಶ್ರೀಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸ್ಥಳೀಯರು ಸೇರಿ ಬೇರೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್: ಮಠದ ಪೀಠಾಧ್ಯಕ್ಷರ ನೇಮಕ ಹಿನ್ನೆಲೆಯಲ್ಲಿ ಕಳೆದ ದಶಕವೊಂದರಿAದ ಭಕ್ತರ ಎರಡು ಗುಂಪುಗಳ ನಡುವಿನ ಮುಸುಕಿನ ಗುದ್ದಾಟ ಕಳೆದೆರೆಡು ದಿನಗಳಿಂದ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಠದ ಸುತ್ತಲು ಹಾಗೂ ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮಠದ ಪೀಠಾಧ್ಯಕ್ಷರ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಮಾಡಿರುವ ಸ್ಥಳಿಯ ಭಕ್ತ ಸಮೂಹದವರು ಈ ಬಾರಿಯ ಪುಣ್ಯಾರಾಧನೆಯನ್ನು ಮಠದ ಬಳಿಯೇ ಮಾಡುವ ನಿರ್ಧಾರವನ್ನು ಕಳೆದ ಎರಡು ದಿನಗಳ ಹಿಂದೆ ವ್ಯಕ್ತಮಾಡಿದ್ದರು. ಈ ವಿಚಾರವಾಗಿ ಭಾನುವಾರ ಪೊಲೀಸ್ ಠಾಣೆಯಲ್ಲಿ ನಡೆದ ಎರಡೂ ಭಕ್ತರ ಬಣಗಳೊಂದಿಗಿನ ಸಭೆಯಲ್ಲಿ ಸಿಪಿಐಪಿ ರಾಮಣ್ಣಾ ಬಿರಾದಾರ ಅವರು ಭಕ್ತರ ಸಮೂಹವೊಂದಕ್ಕೆ ಮಠದ ಮುಂದೆ ಪುಣ್ಯಾರಾಧನೆ ಮಾಡುವುದು ಬೇಡ ಎಂದೆಲ್ಲಾ ತಿಳಿ ಹೇಳಿದ್ದರಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಬಹು ವರ್ಷಗಳ ನಂತರ ಸಿಪಿಐಗಳಾದ ಆರ್.ಎಸ್. ಬಿರಾದಾರ, ಚಂದ್ರಶೇಖರ ಹೆರಕಲ್, ಸ್ಥಳಿಯ ಠಾಣಾಧಿಕಾರಿ ಪ್ರವೀಣ ಬೀಳಗಿ ಹಾಗೂ ಮತ್ತಷ್ಟು ಪಿಎಸ್‌ಗಳ ಮಂದಾಳತ್ವದಲ್ಲಿ ಹೆಚ್ಚಿನ ಪೊಲೀಸ್ ಬಲದೊಂದಿಗೆ ಮಠಕ್ಕೆ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಠದ ಎದುರು ಪುಣ್ಯಾರಾಧನೆ ಮಾಡುವ ವಿಚಾರದಿಂದ ಹಿಂದೆ ಸರಿದ ಭಕ್ತರು ಇತ್ತೀಚಿನ ವರ್ಷಗಳಲ್ಲಿ ಮಾಡುತ್ತಿದ್ದಂತೆ ಗ್ರಾಮದ ಪತ್ರಿಕಟ್ಟೆಯ ಬಳಿ ಇಬ್ಬರೂ ಪೂಜ್ಯದ್ವಯರ ಪುಣ್ಯಾರಾಧನೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿತ್ತು.

ಪತ್ರಿಕಟ್ಟೆಯ ಬಳಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ನಂತರ ಮಧ್ಯಾಹ್ನ ಸಾಮೂಹಿಕವಾಗಿ ಶ್ರೀಮಠಕ್ಕೆ ಆಗಮಿಸಿದ ಭಕ್ತರು ಇಬ್ಬರು ಪೂಜ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಪುಣ್ಯಾರಾಧನೆ ಎರಡೂ ಕಡೆಗಳಲ್ಲಿ ಶ್ರದ್ಧಾಭಕ್ತಿಯಿಂದ ಹಾಗೂ ಶಾಂತತೆಯಿಂದ ನಡೆದಿದ್ದು ಗಮನೀಯ.