ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಒಂದು ದಿನದ ರೋವರಿಂಗ್ ರೇಂಜರಿಂಗ್ ಕುರಿತು ಸಾಮಾನ್ಯ ಮಾಹಿತಿ ಹಾಗೂ ಪುನಶ್ಚೇತನ ಶಿಬಿರವನ್ನು ಬಾಗಲಕೋಟೆ ವಿವಿ ಕುಲಸಚಿವ ಡಾ.ಸೋಮಲಿಂಗ ಗೆಣ್ಣೂರ ಉದ್ಘಾಟಿಸಿದರು. ಡಾ.ಅರುಣಕುಮಾರ ಗಾಳಿ, ಸಿ.ಎ.ಸಾವಳಗಿ, ಎಸ್.ಎಸ್.ದಳವಾಯಿ ಮತ್ತಿತರರು ಇದ್ದರು.  
ಬಾಗಲಕೋಟೆ

ಸ್ಕೌಟ್ಸ್-ಗೈಡ್ಸ್ ನಿಂದ ಸಹೋದರತ್ವ ಬೆಳೆಸುವ ಕಾರ್ಯ

ಪ್ರಮುಖ ಮುಖ್ಯಾಂಶಗಳು

  • ಸಮಾಜದಲ್ಲಿ ಪರಿಸ್ಪರ ಸಹೋದರತ್ವ ಭಾವನೆ ಬೆಳೆಸುವ ಕೆಲಸವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಮಾಡುತ್ತಿವೆ
  • ರೋವರಿಂಗ್ ರೇಂಜರಿಂಗ್ ಕುರಿತ ಸಾಮಾನ್ಯ ಮಾಹಿತಿ
  • ಸಮಾಜದಲ್ಲಿ ವ್ಯಕ್ತಿಯು ತನ್ನ ಮಾತು, ನಡತೆ, ಭಾವನೆಗಳು ಶುದ್ಧವಾಗಿರಬೇಕಾದರೆ ನಿಸ್ವಾರ್ಥದಿಂದ ಸೇವೆ ಮಾಡುವ ಮನಸ್ಥಿತಿಯನ್ನು ಹೊಂದಿರಬೇಕು.
ಬಾಗಲಕೋಟೆ: ಸಮಾಜದಲ್ಲಿ ಪರಿಸ್ಪರ ಸಹೋದರತ್ವ ಭಾವನೆ ಬೆಳೆಸುವ ಕೆಲಸವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಮಾಡುತ್ತಿವೆ ಎಂದು ಬಾಗಲಕೋಟೆ ವಿವಿ ಕುಲಸಚಿವ ಡಾ.ಸೋಮಲಿಂಗ ಗೆಣ್ಣೂರ ಹೇಳಿದರು.
ಜಮಖಂಡಿಯ ಬಾಗಲಕೋಟೆ ವಿವಿ ಹಾಗೂ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿಂದ ಪದವಿ ಕಾಲೇಜಿನ ಉಪನ್ಯಾಸಕರಿಗೆ ಆಯೋಜಿಸಿದ್ದ ‘ಒಂದು ದಿನದ ರೋವರಿಂಗ್ ರೇಂಜರಿಂಗ್ ಕುರಿತ ಸಾಮಾನ್ಯ ಮಾಹಿತಿ ಹಾಗೂ ಪುನಶ್ಚೇತನ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ವ್ಯಕ್ತಿಯು ತನ್ನ ಮಾತು, ನಡತೆ, ಭಾವನೆಗಳು ಶುದ್ಧವಾಗಿರಬೇಕಾದರೆ ನಿಸ್ವಾರ್ಥದಿಂದ ಸೇವೆ ಮಾಡುವ ಮನಸ್ಥಿತಿಯನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ವ್ಯಕ್ತಿ ಹಾಗೂ ಸಮಾಜವನ್ನು ಸದಾ ಚಟುವಟಿಕೆಯುಕ್ತವಾಗಿ ಮಾಡುತ್ತವೆ ಎಂದರು.
ಘಟಕದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿ.ಎ. ಸಾವಳಗಿ ಮಾತನಾಡಿ, ಸಮಾಜಮುಖಿ ಸೇವೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಕಾರ್ಯಚಟುವಟಿಕೆಗಳು ಮಾದರಿಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಮಾತನಾಡಿ, ಈ ಶಿಬಿರದಿಂದ ಉಪನ್ಯಾಸಕರಿಗೆ ಕ್ರಿಯಾತ್ಮಕ ಚಟುವಟಿಕೆಗಳ ಮಾಡಲು ಅನುಕೂಲವಾಗುತ್ತದೆ. ನಿವೃತ್ತಿಯ ನಂತರದಲ್ಲೂ ಸಮಾಜದಲ್ಲಿ ಗೌರವ ಪಡೆಯುವ ಶಿಕ್ಷಕ, ಬೋಧಕ ವರ್ಗವು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜೊತೆಗೂಡಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ದಳವಾಯಿ, ಜಿಲ್ಲಾ ಸಂಘಟಕ ಪ್ರಮೋದ ಚೌಗುಲೆ, ಜಿಲ್ಲಾ ಸಂಘಟನಾ ಶಿಕ್ಷಕ ನಾರಾಯಣ ಯಳ್ಳಿಗುತ್ತಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ರವಿ ಗಡದನ್ನವರ, ಡಾ.ಸುಮಂಗಲಾ ಮೇಟಿ, ಪರಸಪ್ಪ ತಳವಾರ ಉಪಸ್ಥಿತರಿದ್ದರು.
ಶಿಬಿರದಲ್ಲಿ ಜಿಲ್ಲೆಯ 75 ಪದವಿ ಕಾಲೇಜುಗಳ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ರೋವರ್, ರೇಂಜರ್ ಲೀಡರ್‌ಗಳು ಪಾಲ್ಗೊಂಡಿದ್ದರು.