ಬಾಗಲಕೋಟೆ ಬಿವಿವಿ ಸಂಘದ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸಾಲುಮರದ ತಿಮ್ಮಕ್ಕ ಅವರ ಸಂತಾಪ ಸೂಚಕ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಡಾ. ಆರ್. ನಾಗರಾಜ್, ಎಸ್.ಆರ್. ಮೂಗನೂರಮಠ, ಡಾ. ಎಂ.ಎಚ್. ವಡ್ಡರ್, ಡಾ. ಅಪ್ಪು ರಾಥೋಡ್ ಇದ್ದರು.
- ಸಾಹಿತಿ ಡಾ. ಆರ್. ನಾಗರಾಜ್ ಅಭಿಮತ
- ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸಂತಾಪ ಸೂಚಕ ಸಭೆ
- ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ
ಬಾಗಲಕೋಟೆ : ಸಾಲುಮರದ ತಿಮ್ಮಕ್ಕ ಕರ್ನಾಟಕದ ಪ್ರಸಿದ್ಧ ಪರಿಸರವಾದಿ ಮತ್ತು ವೃಕ್ಷಮಾತೆ ಆಗಿದ್ದರು. ತಮಗೆ ಮಕ್ಕಳಿಲ್ಲದ ನೋವನ್ನು ಮರೆಯಲು, ರಸ್ತೆ ಬದಿಯಲ್ಲಿ ಆಲದ ಮರಗಳು ಸೇರಿ ಸಾವಿರಾರು ಸಸಿಗಳನ್ನು ಮಕ್ಕಳಂತೆ ಬೆಳೆಸಿದ್ದು, ಪ್ರಪಂಚದಾದ್ಯಂತ ಪರಿಸರ ಕಾರ್ಯದಲ್ಲಿ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಇಂತಹ ವೃಕ್ಷಮಾತೆಯ ನಿಧನ ಕರ್ನಾಟಕ ರಾಜ್ಯಕ್ಕೆ ಅಲ್ಲದೆ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಡಾ. ಆರ್. ನಾಗರಾಜ್ ತಿಳಿಸಿದರು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಶನಿವಾರ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ತಿಮ್ಮಕ್ಕ ಅವರು ಕಾಯಕವೇ ಕೈಲಾಸ ಎಂಬ ಮನಸ್ಸನ್ನು ಹೊಂದಿದ್ದವರು. ಪರಿಸರ ಸಂರಕ್ಷಣೆ ಮಾಡಲು ಸಾವಿರಾರು ಗಿಡಗಳನ್ನು ನೆಟ್ಟು ಇಡೀ ಭಾರತ ದೇಶಕ್ಕೆ ಮಾದರಿಯಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದರು. 114 ವರ್ಷ ಸಂತೃಪ್ತ ಜೀವನವನ್ನು ಸಾಗಿಸಿದ್ದ ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಹೇಳಿದರು.
ಪ್ರಾ. ಎಸ್.ಆರ್. ಮೂಗನೂರುಮಠ ಮಾತನಾಡಿ, ಸಾಲುಮರದ ತಿಮ್ಮಕ್ಕನವರು ನಮ್ಮ ಬಿವಿವಿ ಸಂಘದ ಮಹಾವಿದ್ಯಾಲಯಗಳಿಗೆ ಭೇಟಿಕೊಟ್ಟು ತಮ್ಮ ಪರಿಸರ ಸಂರಕ್ಷಣೆಯ ಅನುಭವವನ್ನು ಹಂಚಿಕೊಂಡಿದ್ದನ್ನು ಸ್ಮರಿಸಿಕೊಂಡರು. ಡಾ. ಎಂ.ಎಚ್. ವಡ್ಡರ್, ಡಾ. ಅಪ್ಪು ರಾಥೋಡ್ ಮತ್ತಿತರರು ಇದ್ದರು.