ಮುಧೋಳ ತಾಲೂಕಿನ ಮಂಟೂರ ಕ್ರಾಸ್ ಬಳಿ ಶುಕ್ರವಾರ ಕಬ್ಬು ಬೆಳೆಗಾರರು ಗಿಡಗಳನ್ನು ಕಡಿದು ರಸ್ತೆಗೆ ಅಡ್ಡಲಾಗಿ ಟೊಂಗೆಗಳನ್ನು ಇಟ್ಟು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದ ವಾಹನಗಳು ಗಂಟೆಗಟ್ಟಲೆ ಸಾಲಾಗಿ ನಿಂತು, ಪ್ರಯಾಣಿಕರು ಪರದಾಡುವಂತಾಯಿತು. 
ಬಾಗಲಕೋಟೆ

ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆ ರಸ್ತೆ, ಹೆದ್ದಾರಿ ಬಂದ್
  • ರೈತರ ಹೋರಾಟಕ್ಕೆ ಸ್ವಾಮೀಜಿಗಳ ಬಲ
  • ವಾಹನ ಸಂಚಾರಕ್ಕೆ ಸಂಚಕಾರ, ಪ್ರಯಾಣಿಕರ ಪರದಾಟ
ಬಾಗಲಕೋಟೆ: ಕಬ್ಬಿನ ಬಿಕ್ಕಟ್ಟು ಶಮನ ಮಾಡಲು ಸರ್ಕಾರ ಹರಸಾಹಸ ನಡೆಸಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆಗೆ ಉತ್ತರ ಕರ್ನಾಟಕದಲ್ಲಿ ಹಬ್ಬಿರುವ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ದೊಡ್ಡಮಟ್ಟದಲ್ಲಿ ಉಲ್ಬಣವಾಗುತ್ತಿದೆ. ಅದರ ಭಾಗವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನ ಜಾವದಿಂದಲೇ ರಸ್ತೆ ತಡೆ, ಹೆದ್ದಾರಿ ಬಂದ್ ಮೂಲಕ ಪ್ರತಿಭಟನೆ ಕಿಚ್ಚು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಹೋಯಿತು.
ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಹುನಗುಂದ-ಇಳಕಲ್ಲ ಭಾಗದ ರೈತರು ರಾಜ್ಯ ಹೆದ್ದಾರಿಗೆ ಕಲ್ಲುಗಳನ್ನು ಇಟ್ಟು ರಸ್ತೆ ನಡೆಸಿದರು. ಬೆಂಗಳೂರು ಸೇರಿ ದೂರದೂರುಗಳಿಂದ ಬೆಳಗ್ಗೆ ಬಾಗಲಕೋಟೆ ಜಿಲ್ಲೆಗೆ ಆಗಮಿಸುವ ನೂರಾರು ವಾಹನಗಳು ನಿಗದಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಮಧ್ಯಾಹ್ನದ ವರೆಗೂ ರಸ್ತೆಯಲ್ಲಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಟ ಮುಗಿಲು ಮುಟ್ಟಿತ್ತು.
ಇನ್ನು ಕಮತಗಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಗೆ ಇಳಕಲ್ಲ ವಿಜಯಮಹಾಂತ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಬೆಂಬಲ ನೀಡಿದ್ದಲ್ಲದೇ ಬೆಳಗ್ಗೆಯೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಜೊತೆಗೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಹಾಗೆಯೇ ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಹಾಗೂ ಜಮಖಂಡಿ ನಗರಕ್ಕೆ ಸಂಪರ್ಕ ಕಲ್ಪಿಸಲು ಜಿಲ್ಲೆಯ ಅತ್ಯಂತ ವಾಹನ ಮತ್ತು ಜನದಟ್ಟನೆ ಕೇಂದ್ರವಾಗಿರುವ ಬಾಗಲಕೋಟೆ ತಾಲೂಕಿನ ಗದ್ದಿನಕೇರಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 218ನ್ನು ಬಂದ್ ಮಾಡಿದ ರೈತರು ಕೆಲ ಗಂಟೆ ಪ್ರತಿಭಟನೆ ನಡೆಸಿದರು. ಇಲ್ಲಿ ಕ್ಷಣಕ್ಷಣಕ್ಕೂ ಪ್ರತಿಭಟನೆ ಕಾವು ತೀವ್ರಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಯಿತು. ಬೆಳಗ್ಗೆ ಶಾಂತವಾಗಿದ್ದ ಪ್ರತಿಭಟನೆ ಹೊತ್ತು ಕಳೆದಂತೆ ತೀವ್ರವಾಗತೊಡಗಿತು. ಮಧ್ಯಾಹ್ನ ಸರ್ಕಾರದ ವಿರುದ್ಧ ಅಕ್ರೋಶಗೊಂಡ ರೈತರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಅವರ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು.
ಗುರುವಾರದಿಂದ ಆರಂಭವಾಗಿರುವ ಲೋಕಾಪುರದಲ್ಲಿ ಪ್ರತಿಭಟನೆ ಶುಕ್ರವಾರ ಸಹ ಮುಂದುವರಿಯಿತು. ಇಂದು ಹೋರಾಟಕ್ಕೆ ನಾರಿಮಣಿಗಳು ಬಲ ತುಂಬಿದ್ದು, ಬೆಳಗಾವಿ- ರಾಯಚೂರು, ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬಸವೇಶ್ವರ ವೃತ್ತವನ್ನು ಬಂದ್‌ಮಾಡಿ ಪ್ರತಿಭಟನೆ ನಡೆಸಿದರು. ರೈತರ ಬೇಡಿಕೆಯಂತೆ ಬೆಲೆ ನಿಗದಿ ಮಾಡದೇ ಇದ್ದರೆ ಹೋರಾಟವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಇದಕ್ಕೆ ಮಹಿಳೆಯರು ಧ್ವನಿಗೂಡಿಸಿದರು. ಕನ್ನಡ ಜಾನಪದ ಪರಿಷತ್‌ನ ಮಹಿಳಾ ಘಟಕದ ಸದಸ್ಯರು ಪ್ರತಿಭಟನೆಯಲ್ಲಿ ಹೆಗಲಿಗೆ ಹಸಿರು ಟವೆಲ್ ಹಾಕಿಕೊಂಡು ಬಾರಕೋಲ್ ಚಳವಳಿಯಲ್ಲಿ ಪಾಲ್ಗೊಂಡರು.
ಮುಧೋಳ ತಾಲೂಕಿನ ಮಂಟೂರ ಕ್ರಾಸ್ ಬಳಿ ರಸ್ತೆ ತಡೆ ನಡೆಸಿದ ಕಬ್ಬು ಬೆಳೆಗಾರರು, ರಸ್ತೆ ಮಧ್ಯೆ ಅಡ್ಡಲಾಗಿ ಮರಗಳನ್ನು ಕಡಿದು ಹಾಕಿ ರಸ್ತೆ ತಡೆ ನಡೆಸಿದರು. ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ರೈತರು ಕಬ್ಬು ಬೆಳೆಗೆ ಹೆಚ್ಚಿನ ದರ ನಿಗದಿ ಪಡಿಸುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಮುದ್ದಾಪುರ, ತೇರದಾಳ ಪ್ರತಿಭಟನೆಗಳು ನಡೆದವು.

ದೇವಿಗೆ ಪೂಜೆ

ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದಲ್ಲಿ ರೈತರು ಅಲ್ಲಿನ ಪ್ರಸಿದ್ದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ, ಮಹಾಲಕ್ಷ್ಮೀ ದೇವಿ ಎಡಬಲಕ್ಕೆ ಕಬ್ಬಿನ ಪೈರು ಇಟ್ಟು ಪೂಜೆ ಮಾಡಿದರು. ಟನ್ ಕಬ್ಬಿಗೆ 3500 ರೂ. ನಿಗದಿ ಆಗಲಿ ಎಂದು ಚೀಟಿ ಬರೆದಿಟ್ಟು ಪ್ರಾರ್ಥಿಸಿದರು.
ಸಾರಿಗೆ ಬಸ್ ಸಂಚಾರ ಅಸ್ತವ್ಯಸ್ತ
ಹೀಗೆ ಜಿಲ್ಲೆಯ ವಿವಿಧೆಡೆ ಕಬ್ಬು ಬೆಳೆಗಾರರು ಶುಕ್ರವಾರ ಹೋರಾಟವನ್ನು ತೀವ್ರಗೊಳಿಸಿದರು. ರೈತರು ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲ ಕಡೆಗೆ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ್ದರಿಂದ ಶುಕ್ರವಾರ ಇಡೀ ದಿನ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಬಾಗಲಕೋಟೆ ಎನ್‌ಡಬ್ಲುಕೆಆರ್‌ಟಿಸಿ ವಿಭಾಗದಲ್ಲೆ ಅಂದಾಜು 50 ರಿಂದ 60 ಬಸ್‌ಗಳು ಡಿಪೋದಿಂದ ಹೊರಗೆ ಬರಲಾಗಲಿಲ್ಲ.
ಜಿಲ್ಲೆಯ ಬೇರೆ ಘಟಕಗಳಿಂದ ಬಸ್‌ಗಳು ಸಂಚಾರ ಆರಂಭಿಸಿದರೂ ವಿವಿಧೆಡೆ ಪ್ರತಿಭಟನೆ ನಡೆದಿದ್ದರಿಂದ ವಾಹನಗಳು ಅಲ್ಲಲ್ಲಿ ಸಿಕ್ಕು ಹಾಕಿಕೊಂಡರು. ಇನ್ನು ರಾತ್ರಿ ಸಂಚರಿಸಿ ಬೆಳಗ್ಗೆ ಜಿಲ್ಲೆಯ ವಿವಿಧ ಡಿಪೋಗಳಿಗೆ ತಲುಪಬೇಕಿದ್ದ ನೂರಕ್ಕೂ ಅಧಿಕ ಬಸ್‌ಗಳು ನಿಗದಿತ ಸಮಯಕ್ಕೆ ನಿಗದಿತ ಸ್ಥಳ ತಲುಪದೇ ಅಲ್ಲಲ್ಲಿಯೇ ನಿಂತಿದ್ದವು. ಇದರಿಂದ ಸಾರಿಗೆ ಸಂಸ್ಥೆಗೆ ಶುಕ್ರವಾರ ಲಕ್ಷಾಂತರ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ.