ಮುಧೋಳದ ಎಸ್.ಆರ್. ಕಂಠಿ ಮಹಾವಿದ್ಯಾಲಯದಲ್ಲಿ ನೂತನವಾಗಿ ಆರಂಭಗೊಂಡ ಐಟಿಇಪಿ ಶಿಕ್ಷಕರ ತರಬೇತಿ ವಿಭಾಗವನ್ನು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. ಡಾ. ವೀರಣ್ಣ ಚರಂತಿಮಠ ಇದ್ದರು.
- ಸಂಸದ ಗೋವಿಂದ ಕಾರಜೋಳ ಒತ್ತಾಯ
- ಕಂಠಿ ಕಾಲೇಜಿನಲ್ಲಿ ಐಟಿಇಪಿ ತರಬೇತಿ ವಿಭಾಗಕ್ಕೆ ಚಾಲನೆ
- ಕಾಂಗ್ರೆಸ್ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಎನ್‌ಇಪಿ ತಿರಸ್ಕರಿಸಿ ಎಸ್‌ಇಪಿ ಜಾರಿಗೊಳಿಸಿದ್ದಾರೆ.
ಮುಧೋಳ: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 2020ರಲ್ಲಿ ಕೌಶಲ ಆಧಾರಿತ, ತ್ರಿಭಾಷ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಎನ್‌ಇಪಿ ತಿರಸ್ಕರಿಸಿ ಎಸ್‌ಇಪಿ ಜಾರಿಗೊಳಿಸಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬಿಜಿಎಂಡಿಟಿ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ನೂತನವಾಗಿ ಆರಂಭಗೊಂಡ ಸಮಗ್ರ ಶಿಕ್ಷಕರ ಶಿಕ್ಷಣ ಯೋಜನೆ (ಐಟಿಇಪಿ) ಬಿ.ಎ., ಬಿ.ಎಡ್ (ಮಿಡಲ್) ಹಾಗೂ ಬಿ.ಎಸ್ಸಿ, ಬಿ.ಎಡ್ (ಸೆಕೆಂಡರಿ) ತರಬೇತಿ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಕೂಡಲೇ ಎಸ್‌ಇಪಿ ರದ್ದುಗೊಳಿಸಿ ಎನ್‌ಇಪಿಯನ್ನು ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಬಾಗಲಕೋಟೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡುವ ಉದ್ದೇಶದಿಂದ ಸಂಘದ ಅಡಿಯಲ್ಲಿ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಇಂದು ಮುಧೋಳ ಕ್ಯಾಂಪಸ್ ಒಂದರಲ್ಲಿಯೇ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದು, ಸಂಸದ ಗೋವಿಂದ ಕಾರಜೋಳ ಅವರ ಸಹಕಾರ ಸದಾ ಸ್ಮರಣೀಯ ಎಂದರು.
ಐಟಿಇಪಿ ಸಂಯೋಜಕ ಡಾ. ಎಂ.ಕೆ. ಗವಿಮಠ ನ್ಯಾಷನಲ್ ಕಾಮನ್ ಎಂಟ್ರೆನ್ಸ್ ಟೆಸ್ಟ್ (ಎನ್‌ಸಿಇಟಿ) ಮೂಲಕ ಪ್ರವೇಶ ಪಡೆಯುವ ಈ ಸಮಗ್ರ ಶಿಕ್ಷಕರ ಶಿಕ್ಷಣ ಕೋರ್ಸ್ ಆರಂಭಿಸಿದ ಉತ್ತರ ಕರ್ನಾಟಕದ ಮೊದಲ ಸಂಸ್ಥೆ ಎಂಬ ಹೆಮ್ಮೆಗೆ ನಮ್ಮ ಮಹಾವಿದ್ಯಾಲಯ ಪಾತ್ರವಾಗಿದೆ. ಸಾಮಾನ್ಯ ವಿಧಾನದಲ್ಲಿ ಪದವಿ ಹಾಗೂ ಬಿ.ಎಡ್ ಮುಗಿಸಲು ಐದು ವರ್ಷಗಳು ಬೇಕಾಗುತ್ತಿದ್ದು, ಈ ಐಟಿಇಪಿ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಕೇವಲ ನಾಲ್ಕು ವರ್ಷಗಳಲ್ಲೇ ಪದವಿಯೊಂದಿಗೆ ಶಿಕ್ಷಣ ಅರ್ಹತೆ ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಸಮಯ ಹಾಗೂ ಆರ್ಥಿಕ ನಷ್ಟ ತಪ್ಪಲಿದೆ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ . ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್. ಸೂಳಿಭಾವಿ . ಐಟಿಇಪಿ ಸಂಯೋಜಕ ಡಾ. ಎಂ.ಕೆ. ಗವಿಮಠ, ಪ್ರಾಚಾರ್ಯ ಡಾ. ಎಂ.ಆರ್. ಜರಕುಂಟಿ ಇದ್ದರು. ಆರ್.ಆರ್. ಮಾಲಿಪಾಟೀಲ ಹಾಗೂ ಪಿ.ಡಿ. ಕುಂಬಾರ ಇತರರಿದ್ದರು.