ಲೋಕಾಪುರ ಪಟ್ಟಣದ ಲೋಕೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ-2026ರ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಗಣಿ ಉದ್ಯಮದಾರ ಎಂ.ಎ. ವಿರಕ್ತಮಠ, ಹಿರೇಮಠದ ಡಾ. ಚಂದ್ರಶೇಖರ ಸ್ವಾಮಿಜಿ, ದೇವಸ್ಥಾನ ಅರ್ಚಕ ಚನ್ನಯ್ಯಾ ಗಣಾಚಾರಿ ಮತ್ತಿತರರಿದ್ದರು. 
ಬಾಗಲಕೋಟೆ

ಕಲೆಗಳ ಸಂರಕ್ಷಣೆಯಲ್ಲಿ ಕಲಾವಿದರ ಪಾತ್ರ ಪ್ರಮುಖ

ಪ್ರಮುಖ ಮುಖ್ಯಾಂಶಗಳು

  • ಎಂ.ಎ. ವಿರಕ್ತಮಠ ಹೇಳಿಕೆ
  • ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ
ಲೋಕಾಪುರ: ಅರ್ಥಗರ್ಭಿತ ಶಿವ ಭಜನೆಯು ಮಾನವ ಜೀವನಕ್ಕೆ ಮಾರ್ಗದರ್ಶನ ನೀಡುವುದರೊಂದಿಗೆ ಸಮಾಜದಲ್ಲಿ ಶ್ರೇಷ್ಠ ಜೀವನ ನಡೆಸಲು ಪ್ರೇರಣೆಯಾಗುತ್ತದೆ ಎಂದು ಗಣಿ ಉದ್ಯಮದಾರ ಎಂ.ಎ. ವಿರಕ್ತಮಠ ಹೇಳಿದರು.
ಪಟ್ಟಣದ ಲೋಕೇಶ್ವರ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ-2026ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧ್ಯಾತ್ಮಿಕ ಜೀವನ ಅಳವಡಿಸಿಕೊಂಡು ಶಿವ ಭಜನೆಯ ಮೂಲಕ ಪ್ರಾರ್ಥನೆ ಸಲ್ಲಿಸುವುದು ಜೀವನವನ್ನು ಪಾವನಗೊಳಿಸುತ್ತದೆ ಎಂದು ತಿಳಿಸಿದ ಅವರು, ಗ್ರಾಮೀಣ ಕಲೆಗಳ ಸಂರಕ್ಷಣೆಯಲ್ಲಿ ಕಲಾವಿದರ ಪಾತ್ರ ಅತ್ಯಂತ ಮಹತ್ವದ್ದು. ಆಧುನಿಕ ಯುಗದಲ್ಲಿ ಸಾಂಸ್ಕೃತಿಕ ಕಲೆಗಳು ನಶಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅವುಗಳನ್ನು ಉಳಿಸಲು ಕಲಾವಿದರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣಾ ಭಜಂತ್ರಿ ಅವರು ಸಾಂಸ್ಕೃತಿಕ ಕಲೆಗಳ ಅಭೂತಪೂರ್ವ ಕಾರ್ಯಕ್ರಮಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಜಾನಪದ ಗಾಯನ, ಭಜನಾ ಪದ, ಬಿಸುಕಲ್ಲ ಪದ, ಸಂಪ್ರದಾಯ ಪದ, ಶಹನಾಯಿ ವಾದನ, ಸೋಬಾನ ಪದ, ಶಿವ ಭಜನಾ ಗಂಗಾಳ ಪದ, ಹಂತಿ ಪದ ಸೇರಿ ಹಲವು ಪಾರಂಪರಿಕ ಕಲಾ ಪ್ರದರ್ಶನಗಳು ನಡೆದವು. ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾವಿದರು ತಮ್ಮ ಪ್ರತಿಭೆಯಿಂದ ಪ್ರೇಕ್ಷಕರನ್ನು ಮನರಂಜಿಸಿದರು.
ಹಿರೇಮಠದ ಡಾ. ಚಂದ್ರಶೇಖರ ಸ್ವಾಮಿಜಿ ಹಾಗೂ ದೇವಸ್ಥಾನ ಅರ್ಚಕ ಚನ್ನಯ್ಯಾ ಗಣಾಚಾರಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾರ್ಜುನ ಮುದಕವಿ, ಪ್ರಕಾಶ ಚುಳಕಿ, ಪ್ರಮೋದ ತೆಗ್ಗಿ, ಪ್ರವೀಣ ಗಂಗಣ್ಣವರ, ಗೋಪಾಲ ಮೂಲಿಮನಿ, ಸೈಯದ ನದಾಫ್, ಸುರೇಶ ಬನೋಜಿ, ಮಹೇಶ ಹುಗ್ಗಿ, ಗುಣಾಕರ ಶೆಟ್ಟಿ, ಶಿವಾನಂದ ನರಗುಂದ, ಲೋಕಣ್ಣ ಭಜಂತ್ರಿ ಸೇರಿ ಗಣ್ಯರು ಹಾಗೂ ಕಲಾಭಿಮಾನಿಗಳು ಪಾಲ್ಗೊಂಡಿದ್ದರು. ಕೆ.ಪಿ. ಯಾದವಾಡ ನಿರೂಪಿಸಿದರು.