ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿದರು. ಸುರೇಶ ಅಕ್ಕಿವಾಟ, ಶ್ರೀಶೈಲ ಬೀಳಗಿ, ವೆಂಕನಗೌಡ ಪಾಟೀಲ, ಅರ್ಜುನ ಹಲಗಿಗೌಡರ, ಎಂ.ಎಸ್. ಕಂಕಣವಾಡಿ, ಎಸ್.ಆರ್. ಹಳಿಂಗಳಿ ಇತರರಿದ್ದರು. 
ಬಾಗಲಕೋಟೆ

ಮತದಾರರ ಸಹಕಾರದಿಂದಲೇ ಪರಿಷ್ಕರಣೆ ಯಶಸ್ವಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿಕೆ
  • ಸಹಾಯವಾಣಿ ಕೇಂದ್ರ ಆರಂಭ
ರಬಕವಿ/ಬನಹಟ್ಟಿ: ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಚುರುಕುಗೊಂಡಿದ್ದು, ಮತದಾರರ ಅನುಕೂಲಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 2,38,405 ಮತದಾರರು ಇದ್ದು, 236 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಕಾರ್ಯ ನಡೆಯುತ್ತಿದೆ. ಇದುವರೆಗೆ 2,01,100 (ಶೇ.88.88) ಎನ್ಯುಮರೇಷನ್ ಅರ್ಜಿಗಳನ್ನು ಮನೆಮನೆಗೆ ವಿತರಿಸಲಾಗಿದ್ದು, ಜೂನ್ 30ರಿಂದ ಆರಂಭವಾದ ಡಿಜಿಟೈಸೇಶನ್ ಕಾರ್ಯದಲ್ಲಿ 11,491 (ಶೇ.4.82) ಅರ್ಜಿಗಳು ಡಿಜಿಟೈಸ್ ಆಗಿವೆ. ಮತಗಟ್ಟೆಗಳ ಮ್ಯಾಪಿಂಗ್ ಕಾರ್ಯವೂ ಶೇ.98ರಷ್ಟು ಪೂರ್ಣಗೊಂಡಿದೆ ಎಂದರು.
ಮತದಾರರಿಗೆ ಅರ್ಜಿ ಭರ್ತಿ ಹಾಗೂ ತಿದ್ದುಪಡಿ ಪ್ರಕ್ರಿಯೆಯಲ್ಲಿ ನೆರವಾಗಲು ರಬಕವಿ-ಬನಹಟ್ಟಿ, ಮಹಾಲಿಂಗಪುರ ಮತ್ತು ತೇರದಾಳ ನಗರ ಪ್ರದೇಶಗಳ ವಿವಿಧ ಸ್ಥಳಗಳಲ್ಲಿ ಹಾಗೂ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅರ್ಜಿ ಸಲ್ಲಿಕೆ, ಹೆಸರು ಸೇರ್ಪಡೆ, ತಿದ್ದುಪಡಿ ಸೇರಿ ಯಾವುದೇ ಸಮಸ್ಯೆಗಳಿಗೆ ಈ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
18 ವರ್ಷ ಪೂರ್ಣಗೊಳಿಸಿದ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು, ನಕಲಿ, ಮೃತ, ಸ್ಥಳಾಂತರಗೊAಡ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಯಶಸ್ವಿಯಾಗಲು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಜಾಗೃತಿ ಮೂಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುರೇಶ ಅಕ್ಕಿವಾಟ, ಶ್ರೀಶೈಲ ಬೀಳಗಿ, ವೆಂಕನಗೌಡ ಪಾಟೀಲ, ಅರ್ಜುನ ಹಲಗಿಗೌಡರ, ಎಂ.ಎಸ್. ಕಂಕಣವಾಡಿ, ಎಸ್.ಆರ್. ಹಳಿಂಗಳಿ, ನಿಜಾಮುದ್ದೀನ್ ಜಮಾದಾರ, ಪರಶುರಾಮ ಕಗ್ಗೋಡ ಸೇರಿ ಹಲವರು ಉಪಸ್ಥಿತರಿದ್ದರು.