ವಿಜಯವಾಣಿ ಸುದ್ದಿಜಾಲ ಜಮಖಂಡಿ
ಶಿವಾಗಮಗಳಲ್ಲಿ ಶಿವತತ್ವ, ಧಾರ್ಮಿಕ ಆಚರಣೆಗಳನ್ನು ವಿವರಿಸಿದರೆ, ವಚನಗಳು ಶಿವ ತತ್ವ ಜೀವನದ ಅನುಭವದೊಂದಿಗೆ ಬೆಸೆಯುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.
ನಗರ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಮಾನವ ಧರ್ಮ ಮಂಟಪದಲ್ಲಿ ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುವು ಅಜ್ಞಾನ ನಿವಾರಿಸಿ ಜ್ಞಾನದ ಬೆಳಕು ನೀಡುವವನು. ಶಿಷ್ಯನಿಗೆ ಶಿವತತ್ವ ಲಿಂಗದ ಮಹತ್ವ ಆಧ್ಯಾತ್ಮಿಕ ಸಾಧನೆ ಮತ್ತು ನೈತಿಕ ಜೀವನ ಕುರಿತು ಮಾರ್ಗದರ್ಶನ ನೀಡುತ್ತಾನೆ. ಗುರು ಕೃಪೆಯಿಂದ ಶಿಷ್ಯನಲ್ಲಿ ಆತ್ಮವಿಶ್ವಾಸ ವಿವೇಕ ಮತ್ತು ಆತ್ಮ ಪರಿಶೀಲನೆಯ ಗುಣಗಳು ಬೆಳೆಯುತ್ತವೆ. ವೀರಶೈವ ಪರಂಪರೆಯಲ್ಲಿ ಸಿದ್ಧಾಂತ ಸಾಧನೆ ಮತ್ತು ಸಂಪ್ರದಾಯಗಳ ಸಂರಕ್ಷಣೆಯಲ್ಲಿ ಗುರುಪೀಠಗಳು ಹಾಗೂ ಮಠಗಳು ಮಹತ್ವದ ಪಾತ್ರವಹಿಸಿವೆ. ಗುರು ಪರಂಪರೆಯು ಆಧ್ಯಾತ್ಮಿಕ ಜ್ಞಾನ, ಶಿವತತ್ವ ಮತ್ತು ಧಾರ್ಮಿಕ ಮೌಲ್ಯ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಪರಂಪರೆಯಾಗಿದೆ ಎಂದರು.
ಶಿವಾಗಮಗಳು ಪೂಜೆ, ದೀಕ್ಷೆ, ಯೋಗ ಮತ್ತು ಸಾಧನೆಗಳಿಗೆ ಮಾರ್ಗದರ್ಶನ ನೀಡಿದರೆ, ವಚನಗಳು ಕಾಯಕ, ದಾಸೋಹ ಮತ್ತು ಸದಾಚಾರಕ್ಕೆ ಪ್ರೇರಣೆ ನೀಡುತ್ತವೆ. ಶಿವಾಗಮಗಳು ಆಧ್ಯಾತ್ಮಿಕ ಸಾಧನೆಯ ಕ್ರಮಗಳನ್ನು ತಿಳಿಸಿದರೆ, ವಚನಗಳು ಆಧ್ಯಾತ್ಮಿಕ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಪಾಲಿಸಲು ತಿಳಿಸುತ್ತದೆ ಎಂದು ಹೇಳಿದರು.
ಶಿವಾಗಮಗಳು ಪರಂಪರೆಯ ತಾತ್ವಿಕ ಅಡಿಪಾಯ ಒದಗಿಸಿದರೆ ವಚನಗಳು ಅನುಭವದ ಮೂಲಕ ತತ್ವಗಳನ್ನು ಜನ ಸಾಮಾನ್ಯರಿಗೆ ತಲುಪಿಸುತ್ತವೆ. ಶಿವಾಗಮಗಳು ಕೇವಲ ಪೂಜಾ ವಿಧಾನಗಳನ್ನು ತಿಳಿಸುವ ಗ್ರಂಥಗಳಲ್ಲ. ನಾವು ಶಿವ ತತ್ವವನ್ನು ಅರಿಯುವ ಮತ್ತು ಆಧ್ಯಾತ್ಮಿಕ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗದರ್ಶಿಗಳಾಗಿವೆ ಎಂದರು.
ವಚನಗಳು ಪಾಂಡಿತ್ಯದ ಪ್ರದರ್ಶನಕ್ಕಿಂತ ಜೀವನದ ಅನುಭವಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಸರಳವಾದ ಕನ್ನಡ ಭಾಷೆಯ ಮೂಲಕ ಗಹನವಾದ ತತ್ವಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮನಿ ಅಗಸ್ತ್ಯರಿಗೆ ಬೋಽಸಿದ ಸಿದ್ಧಾಂತ ಶಿಖಾಮಣಿ 28 ಶಿವಾಗಮಗಳ ಸಾರ ಸರ್ವಸ್ವವನ್ನು ಒಳಗೊಂಡಿದೆ ಎಂದು ಹೇಳಿದರು.
ಶರಣರ ವಚನಗಳಲ್ಲಿ ಸಿದ್ಧಾಂತ ಶಿಖಾಮಣಿಯ ವಿಚಾರ ಧಾರೆಗಳು ಮೂಡಿ ಬಂದಿವೆ. ಈ ಎರಡರಲ್ಲಿ ಬೇಧಭಾವ ಕಲ್ಪಿಸುವ ಧರ್ಮ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಕಾರ್ಯ ಯಾರೂ ಕೂಡಾ ಮಾಡಬಾರದು. ಆರೋಗ್ಯಪೂರ್ಣ ಸದೃಢ ಸಮಾಜ ನಿರ್ಮಾಣಕ್ಕೆ ಪೂರ್ವಜರ ಚಿಂತನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ ಎಂದರು.
ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನ ಮತ್ತು ಆಧುನಿಕತೆ ಯುಗದಲ್ಲಿ ಮನುಷ್ಯನು ಜ್ಞಾನದಲ್ಲಿ ಮುಂದುವರಿದರೂ ಮಾನವೀಯ ಮೌಲ್ಯ ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ದೇವರನ್ನು ಕೇವಲ ಹೊರಗೆ ಹುಡುಕದೆ, ಅಂತರಂಗದಲ್ಲಿ ಅರಿಯಬೇಕೆಂಬುದನ್ನು ವೀರಶೈವ ಧರ್ಮ ಒತ್ತಿ ಹೇಳುತ್ತದೆ. ಜಾತಿ ಮತಗಳ ಹೆಸರಿನಲ್ಲಿ ಭೇದ ಭಾವ ಮಾಡದೆ ಎಲ್ಲರನ್ನೂ ಗೌರವಿಸುವ ಮತ್ತು ಪ್ರಾಮಾಣಿಕ ಜೀವನವನ್ನು ಅಳವಡಿಸಿಕೊಂಡು ಬಾಳಬೇಕೆಂಬುದನ್ನು ವೀರಶೈವ ಧರ್ಮ ಸಾರುತ್ತದೆ. ವೀರಶೈವ ಧರ್ಮದ ಪಂಚಪೀಠಗಳು ಮತ್ತು ಈ ನಾಡಿನ ಶಾಖಾಮಠಗಳು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಲೇ ಬಂದಿವೆ ಎಂದು ತಿಳಿಸಿದರು.
ಅಫಜಲ್ಪುರ ತಾಲೂಕಿನ ಚಿಣಮಗೇರಿ ಮಹಾಂತೇಶ್ವರ ಮಠದ ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಗಳಿಗೆ `ಶಿವಾಚಾರ್ಯ ರತ್ನ' ಪ್ರಶಸ್ತಿಯನ್ನು ಜಗದ್ಗುರುಗಳು ಪ್ರದಾನ ಮಾಡಿದರು. ಗುಳೇದಗುಡ್ಡದ ಡಾ. ಪರಮೇಶ್ವರಿ ಮೃತ್ಯುಂಜಯ ಹಿರೇಮಠ ಉಪನ್ಯಾಸ ನೀಡಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ, ಸಿದ್ದು ಕೊಣ್ಣೂರ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಎಸಿ ಶ್ವೇತಾ ಬೀಡಿಕರ, ಡಿವೈಎಸ್ಪಿ ಸೈಯ್ಯದ ರೋಷನ ಜಮೀರ್, ತಹಸೀಲ್ದಾರ ಅನಿಲ ಬಡಿಗೇರ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಮೋಹನ ಜಾಧವ, ಸುಶೀಲಕುಮಾರ ಬೆಳಗಲಿ, ಬಿ.ಜಿ. ಪಾಟೀಲ, ಪಿ.ಎಚ್. ಗಾಯಕವಾಡ ಇದ್ದರು.
ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದ ಘೋಷ ಮೊಳಗಿತು. ರಕ್ಷಿತಾ ಕರಡಿ ಸಂಗೀತ ಸೇವೆ ಸಲ್ಲಿಸಿದರು, ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.