ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಮಳೆಯಿಂದಾಗಿ ನೀರು ಸಂಗ್ರಹಗೊಂಡಿರುವುದು. 
ಬಾಗಲಕೋಟೆ

ಕೃಷ್ಣೆ ಒಡಲು ತುಂಬಿದ ತುಂಗಳ ಗುಡ್ಡದ ಮಳೆ

ಪ್ರಮುಖ ಮುಖ್ಯಾಂಶಗಳು

  • ಐದಾರು ಅಡಿ ನೀರು ಸಂಗ್ರಹ
  • ರೈತರ ಮೊಗದಲ್ಲಿ ಮಂದಹಾಸ
ಎಂ.ಎನ್. ನದಾಫ್ ಜಮಖಂಡಿ
ಕೃಷ್ಣಾ ನದಿಗೆ ಮಹಾರಾಷ್ಟ್ರ ದಿಂದ ನೀರು ತರಲು ರಾಜ್ಯ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲರಾಗಿದ್ದರೂ, ವರುಣ ದೇವನ ಕೃಪೆಯಿಂದ ತಾಲೂಕಿನ ತುಂಗಳ ಗುಡ್ಡದಲ್ಲಿ ಸುರಿದ ಭಾರಿ ಮಳೆಗೆ ಮೂರು ಗ್ರಾಮಗಳ ವ್ಯಾಪ್ತಿಯ ನದಿಯಲ್ಲಿ ಐದಾರು ಅಡಿಯ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ರೈತರು ಹಾಗೂ ಗ್ರಾಮಸ್ಥರಲ್ಲಿ ಹೊಸ ಹರ್ಷ ಮೂಡಿದೆ.
ತಾಲೂಕಿನ ತುಂಗಳ ಗುಡ್ಡ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ, ಜಂಬಗಿ ಹಳ್ಳದ ಮೂಲಕ ಹರಿದು ಬಂದ ನೀರು ಕಡಕೋಳ, ಶೂರ್ಪಾಲಿ, ಜಂಬಗಿ ಕೆ.ಡಿ. ಗ್ರಾಮಗಳ ವ್ಯಾಪ್ತಿಯ ಕೃಷ್ಣಾ ನದಿಯನ್ನು ಸೇರಿದೆ. ಪ್ರಸ್ತುತ ನದಿಯಲ್ಲಿ ಅಂದಾಜು ಐದಾರು ಅಡಿಯಷ್ಟು ನೀರು ಸಂಗ್ರಹವಾಗಿದ್ದು, ನದಿ ತೀರದ ರೈತರ ಮುಖದಲ್ಲಿ ಮಂದಹಾಸ ಸೃಷ್ಟಿಸಿದೆ.

ನಿಟ್ಟುಸಿರು ಬಿಟ್ಟ ಜಲಚರ, ಜಾನುವಾರು

ಕೃಷ್ಣಾ ನದಿಯ ಒಡಲು ಬರಿದಾಗಿ ಭೀಕರ ಬೇಸಿಗೆಯಿಂದಾಗಿ ಕಳೆದ ಎರಡು ತಿಂಗಳು ಕಳೆಯುತ್ತಾ ಬಂದರೂ ನದಿಗೆ ನೀರು ಹರಿಸಲು ಯಾರೂ ಮುಂದಾಗಿರಲಿಲ್ಲ. ಆದರೆ, ಕೊನೆಗೂ ಮಳೆರಾಯ ಕೈ ಬಿಡದೆ ಧರೆಗಿಳಿದಿದ್ದಾನೆ. ಈ ಮಳೆಯ ನೀರು ಕೇವಲ ರೈತರ ಜಮೀನುಗಳಿಗೆ ಮಾತ್ರವಲ್ಲದೆ, ಕುಡಿಯುವ ನೀರಿಲ್ಲದೆ ತತ್ತರಿಸುತ್ತಿದ್ದ ನದಿಯ ಜಲಚರಗಳು ಹಾಗೂ ಜಾನುವಾರುಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ಜಲಾವೃತಗೊಂಡ ಐತಿಹಾಸಿಕ ಕೋಟೇಶ್ವರ

ಕಡಕೋಳ ಮತ್ತು ಶೂರ್ಪಾಲಿ ಗ್ರಾಮಗಳ ಮಧ್ಯೆ ಕೃಷ್ಣಾ ನದಿಯಲ್ಲಿರುವ ಐತಿಹಾಸಿಕ ಕೋಟೇಶ್ವರ ದೇವಸ್ಥಾನದ ಸುತ್ತಮುತ್ತಲೂ ಈಗ ನದಿಯ ನೀರು ಆವರಿಸಿಕೊಂಡಿದೆ. ಮನುಷ್ಯರು ಮಾಡಿದ್ದು ನಾಲ್ಕು ದಿನ ಇರಬಹುದು, ಆದರೆ ದೇವರು ಕೊಟ್ಟರೆ ಹಿಡಿಯಲು ಸಾಧ್ಯವಿಲ್ಲ. ಈ ಕಡು ಬೇಸಿಗೆಯ ಕಾಲದಲ್ಲಿ ನಮ್ಮ ರೈತರನ್ನು ಯಾವ ನಾಯಕರು ಕೈಹಿಡಿಯಲಿಲ್ಲ, ಅಧಿಕಾರಿಗಳು-ಸರ್ಕಾರ ನಮ್ಮನ್ನು ಮರೆತರು. ಆದರೆ ಕೊನೆಗೆ ಆ ದೇವರೇ ನಮ್ಮನ್ನು ಕೈಹಿಡಿದಿದ್ದಾನೆ ಎಂದು ಕಡಕೋಳ ಗ್ರಾಮದ ರೈತ ಶ್ರೀಶೈಲ ತಿಮ್ಮಪ್ಪನವರ `ವಿಜಯವಾಣಿ'ಗೆ ತಿಳಿಸಿದರು.