ಬಾಗಲಕೋಟೆ ಲೋಕಾಯುಕ್ತ ಕಚೇರಿಯಲ್ಲಿ ಶುಕ್ರವಾರ ಎಸ್ಪಿ ಎಂ.ಬಿ. ನಂದಗಾಂವಿ ಮಾತನಾಡಿದರು. ಅಧಿಕಾರಿಗಳಾದ ಸುರೇಶ ರೆಡ್ಡಿ, ಮಲ್ಲಿಕಾರ್ಜುನ ಬಿರಾದಾರ, ನಾಗರಾಜ ಕಿಲಾರಿ ಇದ್ದರು. 
ಬಾಗಲಕೋಟೆ

ಸಾರ್ವಜನಿಕರು ಮುಕ್ತವಾಗಿ ದೂರು ನೀಡಿ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರು ದೂರು ದುಮ್ಮಾನ ಸಲ್ಲಿಸಬಹುದು
  • ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಕ್ಕೆ ವಿಳಂಬ ಮಾಡಿದರೂ ದೂರು ಕೊಡಿ
  • ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ಹೇಳಿಕೆ
  • ಪ್ರತಿ ತಿಂಗಳು ಎರಡನೇ ಬುಧವಾರ ಸಭೆ
ಬಾಗಲಕೋಟೆ: ರಾಜ್ಯ ಲೋಕಾಯುಕ್ತರ ನಿರ್ದೇಶನದ ಮೇರೆಗೆ ಸಾರ್ವಜನಿಕರಿಂದ ದೂರು ದುಮ್ಮಾನಗಳನ್ನು ಸ್ವೀಕರಿಸಲು ಪ್ರತಿ ತಿಂಗಳು 2ನೇ ಬುಧವಾರ ಸಭೆ ನಡೆಸಲಾಗುವುದು ಎಂದು ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ತಿಳಿಸಿದರು.
ಲೋಕಾಯುಕ್ತ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿ ತಿಂಗಳು ಒಂದೊಂದು ತಾಲೂಕಿನಲ್ಲಿ ಸರದಿಯಂತೆ ಈ ಸಭೆ ನಡೆಸಲಾಗುವುದು ಎಂದರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಲು ಯಾರಾದರೂ ಲಂಚದ ಬೇಡಿಕೆ ಇಡುವುದು, ಭ್ರಷ್ಟಾಚಾರ ವಿಚಾರವಾಗಿ ದೂರುಗಳು ಇದ್ದರೆ ಸಾರ್ವಜನಿಕರು ಮುಕ್ತವಾಗಿ ಲೋಕಾಯುಕ್ತ ಕಚೇರಿಗೆ ಬಂದು ದೂರು ನೀಡಬಹುದು. ಕಚೇರಿ ತಮಗೆಲ್ಲ ಮುಕ್ತವಾಗಿರುತ್ತದೆ. ತಾವು ಕಚೇರಿಗೆ ಆಗಮಿಸಿ ಲಿಖಿತ ದೂರು ನೀಡಬಹುದು. ಅಥವಾ ಇಲಾಖೆಗಳಲ್ಲಿ ತಮ್ಮ ಅರ್ಜಿಗಳ ವಿಲೇವಾರಿಗೆ ಅನಗತ್ಯ ವಿಳಂಬ ಮಾಡುತ್ತಿದ್ದರೂ ಸಹ ಆ ಬಗ್ಗೆ ದಾಖಲೆಗಳ ಸಮೇತ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಇ-ಖಾತಾ ವಿಚಾರವಾಗಿ ಸಾಕಷ್ಟು ವಿಳಂಬ ಮಾಡಲಾಗುತ್ತದೆ ಎನ್ನುವ ದೂರು ಬಂದಿದ್ದ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ಪುರಸಭೆಗಳಿಗೆ ಲೋಕಾಯುಕ್ತ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳದಲ್ಲೇ ಅನೇಕರಿಗೆ ಇ-ಖಾತೆ ಸಹ ಕೊಡಿಸಲಾಗಿದೆ. ಇ-ಖಾತೆ ನೀಡಲು ವಿಳಂಬ ಮಾಡುತ್ತಿರುವ ಕಾರಣ ಕುರಿತು ಲೋಕಾಯುಕ್ತ ಕಚೇರಿಗೆ ವರದಿಯನ್ನು ಸಲ್ಲಿಸಲಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿ ಸಾಗಿದೆ ಎಂದರು.

ಅಕ್ರಮ ಮರಳುಗಾರಿಕೆ ಮತ್ತೆ ನಾಲ್ಕು ಪ್ರಕರಣ

ಅಕ್ರಮ ಮರಳುಗಾರಿಕೆ ಕುರಿತು ಜಿಲ್ಲೆಯಲ್ಲಿ ಈಚೆಗೆ ಲೋಕಾಯುಕ್ತ ತಂಡಗಳಿಂದ ಏಕಕಾಲಕ್ಕೆ 36 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಪ್ರಕರಣದ ಬಗ್ಗೆ, ಈಗಾಗಲೇ ಲೋಕಾಯುಕ್ತರ ಸೂಚನೆ ಮೇರೆಗೆ 17 ಪ್ರಕರಣಗಳು ದಾಖಲಾಗಿದ್ದು, ಅದಾದ ಬಳಿಕ ಕಂದಾಯ ಇಲಾಖೆಯಿಂದ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲು ಮಾಡಿದ್ದಾರೆ.
ಮುಖ್ಯವಾಗಿ ದಾಳಿ ಮಾಡಿದ ಸ್ಥಳಗಳಲ್ಲಿ ವಿವಿಧ ನಿಯಮಗಳು ಉಲ್ಲಂಘನೆ ಆಗಿರುವುದು ಕಂಡು ಬಂದಿದ್ದರಿಂದ ಅದಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ನೀರಾವರಿ, ಪರಿಸರ ಮಾಲಿನ್ಯ ನಿಯಂತ್ರಣ ಆರ್‌ಟಿಒ, ಪಿಡಬ್ಲ್ಯುಡಿ, ವಾಟರ್‌ಬೋರ್ಡ್, ಸರ್ವೇ, ಪೊಲೀಸ್, ಅರಣ್ಯ ಇಲಾಖೆಗಳ ನಿಯಮಗಳು ಉಲ್ಲಂಘನೆ ಬಗ್ಗೆ ಆಯಾ ಇಲಾಖೆಯವರು ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಕಚೇರಿಗೆ ವರದಿ ಸಲ್ಲಿಸುವಂತೆ ತಿಳಿಸಿದ್ದು, ಆ ಬಗ್ಗೆ ಇಲಾಖೆ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ಮತ್ತು ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.
ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ದಾಳಿ ಸಂದರ್ಭದಲ್ಲಿ ಪತ್ತೆ ಮಾಡಿರುವ ವಾಹನಗಳು, ಯಂತ್ರೋಪಕರಣಗಳು ಹಾಗೂ ಮರಳು ಸಂಗ್ರಹ ಸ್ಥಳಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಲ್ಲದೇ ಇವುಗಳಿಗೆ ಸಂಬಂಧಿಸಿದಂತೆ ಫೋಟೋ, ವಿಡಿಯೋ, ದ್ರೋಣ ಕ್ಯಾಮರಾ ಫುಟೇಜ್‌ಗಳೆಲ್ಲವನ್ನು ನೀಡಿದ್ದೇವೆ. ಅವುಗಳನ್ನು ಆಧರಿಸಿ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಈ ವರೆಗೂ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಎಂಎಂಆರ್‌ಡಿ ಅಡಿಯಲ್ಲಿ ಕೇಸ್ ಹಾಕುತ್ತಿದ್ದರು. ಅಕ್ರಮ ಮರಳುಗಾರಿಕೆಯಿಂದ ವಿವಿಧ ಇಲಾಖೆಗಳು ನಿಯಮಗಳು ಉಲ್ಲಂಘನೆ ಬಗ್ಗೆ ಮೊದಲ ಭಾರಿಗೆ ಪ್ರಕರಣ ದಾಖಲು ಮಾಡಲು ತಿಳಿಸಿದ್ದರಿಂದ ಇದಕ್ಕೆ ಸ್ವಲ್ಪ ಸಮಯಾವಕಾಶ ನೀಡಬೇಕಾಗುತ್ತದೆ ಎಂದರು.
ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡ್ಡಿ ಎಂ.ಎಸ್, ಲೋಕಾ ಅಧಿಕಾರಿಗಳಾದ ನಾಗರಾಜ ಕಿಲಾರಿ, ಮಲ್ಲಿಕಾರ್ಜುನ ಬಿರಾದಾರ ಇದ್ದರು.

ಲೋಕಾ ಹೆಸರಿನಲ್ಲಿ ಬೆದರಿಕೆ ಬಂದರೆ ಮಾಹಿತಿ ನೀಡಿ

ಜಿಲ್ಲೆಯಲ್ಲಿ ಈ ಹಿಂದೆ ಲೋಕಾಯಕ್ತರೆಂದು ಸುಳ್ಳು ಹೇಳಿ ಅಽಕಾರಿಗಳನ್ನು ಬೆದರಿಸಿದ ಘಟನೆ ಬಗ್ಗೆ ಪ್ರಶ್ನಿಸಿದಾಗ, ಲೋಕಾಯುಕ್ತರ ಹೆಸರಿನಲ್ಲಿ ಯಾರಾದರೂ ಫೋನ್ ಮಾಡಿದರೆ ತಮಗೆ ಬಂದಿರುವ ಫೋನ್ ನಂಬರ್ ಯಾವುದೆಂದು ಪರಿಶೀಲಿಸಬೇಕು. ಇಲಾಖೆ ವೆಬ್‌ಸೈಟ್‌ನಲ್ಲಿ ಅಧಿಕಾರಿಗಳಿಗೆ ಇಲಾಖೆಯಿಂದ ನೀಡಿರುವ ನಂಬರ್ ಇರುತ್ತದೆ. ಆ ನಂಬರ್ ಇದೆಯಾ? ಎಂದು ಪರಿಶೀಲಿಸಿ, ಇಲ್ಲವಾದರೆ ಅಂತಹ ಕರೆಗಳು ಇದ್ದರೆ ಕೂಡಲೇ ಕಚೇರಿ ಗಮನಕ್ಕೆ ತರಬಹುದು ಎಂದು ಉತ್ತರಿಸಿದರು.