ಬಾಗಲಕೋಟೆ ತೋವಿವಿ ಸಭಾ ಭವನದಲ್ಲಿ ಗುರುವಾರ ನಡೆದ ಐಎಎಸ್, ಕೆಎಎಸ್ ಆಕಾಂಕ್ಷಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಜಿ.ಪಂ. ಸಿಇಒ ಶಶಿಧರ ಕುರೇರ ಉದ್ಘಾಟಿಸಿದರು. ತೋವಿವಿ ಕುಲಪತಿ ಡಾ.ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಮತ್ತಿತರರು ಇದ್ದರು.
- ಜಿ.ಪಂ. ಸಿಇಒ ಕುರೇರ ಪ್ರೇರಣಾದಾಯಕ ನುಡಿ
- ಐಎಎಸ್ ಬರೀ ಹುದ್ದೆಯಲ್ಲ
- ದೇಶಕ್ಕೆ ಸಲ್ಲಿಸುವ ನ್ಯಾಯಯುತ ಸೇವೆ
ಬಾಗಲಕೋಟೆ: ಪ್ರತಿಯೊಬ್ಬರಲ್ಲೂ ವಿಶ್ವ ಆಳುವ ಶಕ್ತಿ ಇರುತ್ತದೆ. ಇದನ್ನು ಸಾಧಿಸಲು ನಿರಂತರವಾಗಿ ಪರಿಶ್ರಮ, ಸುದೀರ್ಘ ಪ್ರಯತ್ನ ಬೇಕಾಗುತ್ತದೆ. ಈ ಗುರಿ ಸಾಧನೆಗೆ ಪರಿಣಾಮಕಾರಿ ಅಧ್ಯಯನ ತಂತ್ರಗಳು ಮತ್ತು ಸಮಯ ನಿರ್ವಹಣೆ ಅಳವಡಿಸಿಕೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ. ಕೌಶಲಾಭಿವೃದ್ಧಿ, ತೋವಿವಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಆಕಾಕ್ಷಿಗಳಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿನಿಂದ ಎಲ್ಲರೂ ಬುದ್ಧಿವಂತರಾಗಿ ಹುಟ್ಟುವುದಿಲ್ಲ. ಅವರು ಬೆಳೆದು ಬಂದ ಹಾದಿ, ಪ್ರಯತ್ನದ ಲದಿಂದ ಯಶಸ್ಸು ಕಂಡುಕೊಂಡಿರುತ್ತಾರೆ. ಭಯ ಇಲ್ಲದಿದ್ದರೇ ಗುರಿ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ನಮಗೆ ಸಮಸ್ಯೆಗಳು ಎದುರಾದಾಗ ಮಾತ್ರ ಅವುಗಳಿಗೆ ಪರಿಹಾರ ಕಂಡುಕೊಂಡು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ತಮ್ಮ ಐಎಎಸ್ ಗುಟ್ಟು ಬಿಚ್ಚಿಟ್ಟ ಸಿಇಒ
ನಾನು ಸಹ ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ನಂತರ 6 ರಿಂದ 12ನೇ ತರಗತಿವರೆಗೆ ನವೋದಯ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದೇನೆ. ಆಗ ಇಷ್ಟೊಂದು ಅನುಕೂಲ ಇರಲಿಲ್ಲ. ಶಿಕ್ಷಕರು ನಮಗೆ ಮಾರ್ಗದರ್ಶಕರಾಗಿದ್ದರು. ನಾವು ಕಲಿಯುತ್ತಿರುವಾಗ ನವೋದಯ ವಿದ್ಯಾಲಯದಲ್ಲಿನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿದ್ದರು. ಅವರ ರೀತಿಯಲ್ಲಿ ನಾನು ಕೂಡಾ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು.
ಆಗ ನಾವು ಸ್ವಂತವಾಗಿ ಓದಿ ಪರೀಕ್ಷೆಗಳನ್ನು ಬರೆಯುತ್ತಿದ್ದೇವು. ಸ್ಪರ್ಧಾತ್ಮ ಪರೀಕ್ಷೆಯನ್ನು ಬರೆದು ನಾಲ್ಕು ಪರೀಕ್ಷೆಯಲ್ಲಿ ಪಾಸಾಗಿ ನಾಲ್ಕು ಹುದ್ದೆಗಳಿಗೆ ನೇಮಕಾತಿ ಪತ್ರ ಬಂದಿದ್ದವು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ, ಸ್ಟಾಫ್ ಸೆಲೆಕ್ಷನ್ ಕಮೀಷನ್ ಪರೀಕ್ಷೆಯಲ್ಲಿ ಎರಡು ಹುದ್ದೆ ಹಾಗೂ ಬ್ಯಾಂಕ್ ಹುದ್ದೆ ಪಡೆದುಕೊಂಡಿರುವುದಾಗಿ ತಮ್ಮ ಜೀವನಾನುಭವವನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಟ್ಟರು.
ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ಅಸಾಧ್ಯವಾದುದು ಯಾವುದು ಇರುವುದಿಲ್ಲ. ಕಠಿಣ ಪರಿಶ್ರಮ, ಸತತ ಪ್ರಯತ್ನ ಇದ್ದರೆ ಸಾಕು ಅಂದುಕೊಂಡ ಕಾರ್ಯ, ಧ್ಯೇಯವನ್ನು ತಲುಪಲು ಸಾಧ್ಯವಾಗುತ್ತದೆ. ಐಎಎಸ್ ಎಂಬುದು ಕೇವಲ ಹುದ್ದೆ ಅಲ್ಲ, ದೇಶಕ್ಕೆ ನ್ಯಾಯಯುತವಾಗಿ ಸಲ್ಲಿಸುವ ಸೇವೆಯಾಗಿದೆ. ಉನ್ನತ ಮಟ್ಟದ ಹುದ್ದೆ ಇದಾಗಿದ್ದು, ಓರ್ವ ಐಎಎಸ್ ಅಧಿಕಾರಿ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುತ್ತಾನೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬೆಂಗಳೂರಿನ ದೆಹಲಿ ಇನ್‌ಸೈಟ್‌ನ ನಿರ್ದೇಶಕ ಜಿ.ಬಿ. ವಿನಯಕುಮಾರ ಅವರು, ಐಎಎಸ್, ಕೆಎಎಸ್ ಪರೀಕ್ಷೆ ತಯಾರಿಗೆ ಆರಂಭಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡುವ ಕುರಿತು ಉಪನ್ಯಾಸ ನೀಡಿದರು.
ತೋವಿವಿಯ ಡೀನ್ ಡಾ. ಬಾಲಾಜಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಬೆಳಗಾವಿ ಜಿಎಸ್‌ಟಿ ಸಹಾಯಕ ಆಯುಕ್ತ ಶಾನೂರ ಜಮಾದಾರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ತೋವಿವಿಯ ಡೀನ್ ಡಾ. ಶಾಂತಪ್ಪ ಟಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ 1600 ವಿದ್ಯಾರ್ಥಿಗಳು ಭಾಗಿ
ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಯಲದ, ತೋವಿವಿಯ ಹಾಗೂ ಇತರೆ ಕಾಲೇಜು ಸೇರಿ ಒಟ್ಟು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಗಾರಕ್ಕೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 1600 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.