ಇಳಕಲ್ಲ ತಾಲೂಕಿನ ಹೇರೂರ ಸಮೀಪದ ಹಳ್ಳದ ಮೇಲೆ ಹರಿಯುತ್ತಿರುವ ನೀರಿನಲ್ಲಿ ಬೈಕ್ ಸವಾರರು ಹರಸಾಹಸ. 
ಬಾಗಲಕೋಟೆ

ತುಂಬಿ ಹರಿವ ಎರೆಹಳ್ಳ ಜನತೆ ಪರದಾಟ..!

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಪ್ರತಿವರ್ಷವೂ ತಪ್ಪದ ಸಂಕಟ
  • ಸೇತುವೆ ಎತ್ತರಕ್ಕೆ ಅಧಿಕಾರಿಗಳ ಮೀನಮೇಷ
ಗುರು ಗಾಣಗೇರ ಇಳಕಲ್ಲ
ಬಿಸಿಲಿನ ತಾಪಕ್ಕೆ ಬೆಂಡಾಗಿದ್ದ ತಾಲೂಕಿನ ಜನರಿಗೆ ಬುಧವಾರ ಸುರಿದ ಮಳೆ ತಂಪು ತಂದಿದೆ. ಆದರೆ ಮಳೆಯಿಂದಾಗಿ ಹೇರೂರು ಸಮೀಪದ ಎರೆ ಹಳ್ಳ ತುಂಬಿ ಹರಿದ ಪರಿಣಾಮ ಚಿನ್ನಾಪುರ, ತುಂಬ ಗ್ರಾಮಕ್ಕೆ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ.
ಕಿರಿದಾದ ಸೇತುವೆ , ಎರಡು ಬದಿಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಜೀವ ಭಯದಲ್ಲಿ ಮುಂದೆ ಸಾಗಬೇಕು. ಮಳೆ ಬಂದರೆ ಹಳ್ಳವು ತುಂಬಿ ಹರಿಯುತ್ತದೆ. ಪಾದಚಾರಿಗಳು, ವಾಹನ ಸವಾರರು ಓಡಾಡುವುದು ಕಷ್ಟಕರ.
ತುಂಬ, ಚಿನ್ನಾಪುರ ಮಾರ್ಗದತ್ತ ನಿತ್ಯ ನೂರಾರು ವಾಹನಗಳು ಎರೆ ಹಳ್ಳದ ಮೇಳೆ ಸಂಚಾರ ಮಾಡುವುದು ಅನಿವಾರ್ಯ.
ವಾಹನ ಸವಾರರು, ರೈತರು ಮಳೆಗಾಲದಲ್ಲಿ ಈ ಹಳ್ಳ ದಾಟಲು ಹರ ಸಾಹಸ ಪಡಬೇಕು. ಸ್ವಲ್ಪ ಮಳೆಯಾದರೆ ಸಾಕು ಹಳ್ಳವು ಭರ್ತಿ ತುಂಬಿ ಹರಿಯುತ್ತದೆ. ಇದರಿಂದ ಸಾವಿರಾರು ಜನ ನಿಗದಿತ ಸ್ಥಳ ತಲುಪಲು ಪ್ರಾಣ ಒತ್ತೆಯಿಟ್ಟು ಮುಂದೆ ಸಾಗಬೇಕು. ಹತ್ತಾರು ವರ್ಷಗಳಿಂದ ಈ ಸಮಸ್ಯೆಯಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಮಳೆಗಾಲ ಬಂದರೆ ಈ ಭಾಗದ ಜನರ ಎದೇ ಢವ ಢವ ಎನ್ನುವಂತಾಗಿದೆ.
"

ಹಳ್ಳ ಹರಿಯುವ ಸಮಯದಲ್ಲಿ ರಸ್ತೆ ದಾಟುವುದು ದುರ್ಲಭ. ನೀರಿನಲ್ಲಿ ಹರಿದುಕೊಂಡು ಹೋಗುವ ಸಂಭವವಿದ್ದು, ಅಧಿಕಾರಿಗಳು ಗಮನ ಹರಿಸಬೇಕು. ಶೀಘ್ರದಲ್ಲಿ ಸೇತುವೆ ಎತ್ತರಿಸಬೇಕು.

— | ಸಂಗಮೇಶ ಜೋಗಿನ ಬೈಕ್ ಸವಾರ