ಬಾಗಲಕೋಟೆ ಜಿಲ್ಲೆಯಲ್ಲಿ ಈಚೆಗೆ ಲೋಕಾಯುಕ್ತ ಅಧಿಕಾರಿಗಳ ತಂಡವೂ ದಾಳಿ ವೇಳೆ ನದಿಯಲ್ಲಿ ಯಾಂತ್ರಿಕೃತ ದೋಣಿ ಬಳಸಿಕೊಂಡು ಮರಳು ಎತ್ತಿ ಸಂಗ್ರಹಿಸುತ್ತಿರುವುದನ್ನು ಪತ್ತೆ ಮಾಡಿರುವುದು.
- ಪ್ರಭಾವಿಗಳು ಬಚಾವ್ ಆಗಲು ಒತ್ತಡ ತಂತ್ರ
- ಲೂಟಿ ಹಣದಲ್ಲಿ ಪಾಲು ಹಂಚಿಕೆ
- ಮೂರು ನದಿ ಪಾತ್ರದಲ್ಲೂ ಅಕ್ರಮ
ಬಾಗಲಕೋಟೆ: ಒನ್, ಟು, ಥ್ರೀ ನಿಯಮ ಪಾಲನೆ ಮಾಡುತ್ತೀರಾ? ಓಕೆ, ಆಗಿದ್ದರೆ ಸಿಕ್ಕ ಸಿಕ್ಕ ಕಡೆಗೆ ನಿಮಗೆ ತೋಚಿದಂತೆ ನೆಲ ಬಗೆದು ಮರಳು ಎತ್ತಿಕೊಂಡು ಹೋಗಬಹುದು. ನಿಮ್ಮನ್ನು ಯಾರೂ ತಡೆಯಲ್ಲ. ನಿಯಮ ಪಾಲನೆ ಮಾಡಲು ಸಿದ್ಧರಿಲ್ವಾ? ಹಾಗಿದ್ದರೆ ನಿಮಗೆ ಇಲ್ಲಿ ಅಕ್ರಮ ದಂಧೆಗೆ ನಡೆಸಲು ಅವಕಾಶ ಇಲ್ಲವೇ ಇಲ್ಲ.
ಜಿಲ್ಲೆಯಲ್ಲಿ ಯಥೇಚ್ಛವಾಗಿ ಆಹೋರಾತ್ರಿ ಅಕ್ರಮ ಮರಳು ದಂಧೆಗೆ ಯಾವುದೂ ಮತ್ತು ಯಾರದ್ದೂ ಅಡೆತಡೆ ಇಲ್ಲದೇ ಸರಾಗವಾಗಿ ನಡೆಸಿಕೊಂಡು ಹೋಗಬೇಕಿದ್ದರೆ ಈ ಒನ್, ಟು, ಥ್ರೀ ನಿಯಮ ಕಡ್ಡಾಯವಂತೆ.
ಇದೀಗ ಈ ಒನ್, ಟು, ಥ್ರೀ ನಿಯಮದ ಗಡಿಯಲ್ಲಿ ನಮೂದಾಗದೇ ಇರುವ ಲೋಕಾಯುಕ್ತ ತಂಡದಿಂದ ಇದೀಗ ಏಕಕಾಲದಲ್ಲಿ 24 ಪ್ರದೇಶಗಳ ಮೇಲೆ ದಾಳಿ ನಡೆದು ಅಕ್ರಮದ ಕಬಂಧಬಾಹು ಬಹಿರಂಗಗೊಂಡಿದೆ. ಇದು ಅಕ್ರಮಕೋರರ ಪಾಲಿಗೆ ಆಶ್ಚರ್ಯ ಮೂಡಿಸಿದ್ದರೂ ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ ಮರಳು ಎತ್ತುತ್ತಿರುವುದು, ಸಾಗಾಟಕ್ಕೆ ಬೇರೆಯವರ ವಾಹನ ಬಳಕೆ ಮಾಡುವ ತಂತ್ರದಿಂದಾಗಿ ದಂಧೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ವಿನಃ ಈ ಅಕ್ರಮದ ವಾರಸುದಾರರಿಗೆ ತೊಂದರೆ ಆಗಲ್ಲ ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆದಿವೆ.
ಮಲಪ್ರಭಾ ತೀರದ ಮರಳಿಗೆ ಭಾರಿ ಬೇಡಿಕೆ
ಮೂರು ನದಿಗಳು ಹರಿದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಮರಳು ಲಭ್ಯವಾಗುತ್ತದೆ. ಅದರಲ್ಲೂ ಮಲಪ್ರಭಾ ತೀರದ ಬಾದಾಮಿ, ಹುನಗುಂದ ತಾಲೂಕಿನಲ್ಲಿ ಎತ್ತುವ ಮರಳಿಗೆ ಹೆಚ್ಚಿನ ಬೇಡಿಕೆ ಮತ್ತು ದುಭಾರಿ ಬೆಲೆಯೂ ಇದೆ. ಇಲ್ಲಿ ಕೆಲವಡೆ ನೆಪ ಮಾತ್ರಕ್ಕೆ ಅಧಿಕೃತ ಮರಳುಗಾರಿಕೆ ಪರವಾನಗಿ ಪಡೆದರೂ ಪಾಯಿಂಟ್‌ಗಳಲ್ಲಿ ನಿಯಮ ಉಲ್ಲಂಘನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಈ ಅಕ್ರಮ ದಂಧೆ ನಿರಾತಂಕವಾಗಿ ನಡೆಯಬೇಕಿದ್ದರೆ ಒನ್, ಟು, ಥ್ರೀ ನಿಯಮ ಪಾಲನೆ ಮಾಡಬೇಕು. ಅಂದರೆ ಅಕ್ರಮದಿಂದ ಬರುವ ಹಣದಲ್ಲಿ ಮೂರು ಪಾಲು ಹಂಚಿಕೆ ಆಗಬೇಕಂತೆ. ಒಂದು ಪಾಲು ಸಹಕಾರ ನೀಡುವ ಅಧಿಕಾರಿ ವರ್ಗಕ್ಕೆ, ಮತ್ತೊಂದು ಪಾಲು ಜನಪ್ರತಿನಿಧಿಗಳು ಅಥವಾ ಅದರ ಮೇಲುಸ್ತುವಾರಿ ನೋಡಿಕೊಳ್ಳುವ ಅವರ ಅತ್ಯಾಪ್ತರಿಗೆ ಮತ್ತೊಂದು ಪಾಲು ಅಕ್ರಮಕೋರರಿಗೆ ಎನ್ನುವುದು ಈ ಅಕ್ರಮ ದಂಧೆಕೋರರು ಇಟ್ಟುಕೊಂಡಿರುವ ಕೋಡ್ ಎಂದು ಹೇಳಲಾಗುತ್ತಿದೆ.
ಹಾಗೆಂದು ಈ ನಿಯಮ ಘಟಪ್ರಭಾ ಮತ್ತು ಕೃಷ್ಣಾ ಬೆಲ್ಟ್‌ನಲ್ಲಿ ಇಲ್ಲವೆಂದೇನಿಲ್ಲ. ಅಲ್ಲಿಯೂ ಇದು ಜಾರಿಗೆ ಇದೆ. ಕೆಲವು ಕಡೆಗೆ ನೇರವಾಗಿ ಜನಪ್ರತಿನಿಧಿಗಳು ಭಾಗವಹಿಸಲ್ಲ. ಕ್ಷೇತ್ರದಲ್ಲಿ ಅದಕ್ಕೆಂದೆ ತಮ್ಮ ಆಪ್ತರನ್ನು ಬಿಟ್ಟಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.
ಕೇಸ್ ಸ್ಟ್ರಾಂಗ್ ಮಾಡದಂತೆ ಒತ್ತಡ ...?
ಲೋಕಾಯುಕ್ತ ಅಧಿಕಾರಿಗಳ ತಂಡ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿದೆ. ಯಾವೆಲ್ಲ ಇಲಾಖೆ ಅಡಿಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎನ್ನುವ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಕೇಸ್ ದಾಖಲಿಸಬೇಕಿದೆ. ಲೋಕಾಯುಕ್ತರು ಮುಖ್ಯವಾಗಿ ಕಂದಾಯ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಪರಿಸರ, ಜಲ ಸಂರಕ್ಷಣೆ, ಸಾರ್ವಜನಿಕರ ಆಸ್ತಿ ನಷ್ಟ ನಿಯಮ ಉಲ್ಲಂಘನೆ ಕೇಸ್ ದಾಖಲು ಮಾಡುವಂತೆ ನಿರ್ದೇಶನ ನೀಡಿದ್ದು, ಅಕ್ರಮಕೋರರಿಗೆ ನಡುಕ ಹುಟ್ಟಿಸಿದೆ. ಹೀಗಾಗಿಯೇ ಇದೀಗ ಅಕ್ರಮ ಮರಳು ದಂಧೆಯ ವಿರುದ್ಧ ಅಷ್ಟೊಂದು ಸ್ಟ್ರಾಂಗ್ ಕೇಸ್ ದಾಖಲಿಸದಂತೆ ಒತ್ತಡ ಹಾಕುವ ಕೆಲಸವನ್ನು ಶುರುವಿಟ್ಟುಕೊಂಡಿದ್ದಾರೆ ಎನ್ನುವ ಮಾತುಗಳು ಇವೆ.
ಮುಖ್ಯವಾಗಿ ಲೋಕಾಯುಕ್ತರು ದಾಳಿ ಮಾಡಿರುವ ಪಾಯಿಂಟ್‌ಗಳಲ್ಲಿ ಅಕ್ರಮದ ಹಿಂದೆ ಇರುವ ಕುಟುಂಬ ರಾಜಕೀಯವಾಗಿ ಅತ್ಯಂತ ಪ್ರಭಾವಿ ಕುಟುಂಬವಾಗಿದ್ದು, ಸರ್ಕಾರದ ಮಟ್ಟದಲ್ಲೂ ಪ್ರಭಾವ ಬೀರುವವರು ಇದ್ದಾರೆ. ಅಕ್ರಮದಲ್ಲಿ ನೇರವಾಗಿ ಅವರ ಹೆಸರು ಬರಲ್ಲವಾದರೂ ಆಳವಾದ ತನಿಖೆ ನಡೆದು, ಅಲ್ಲಿನ ಮರಳು ಎಲ್ಲಿಗೆ ಸಾಗಾಟವಾಗಿದೆ? ಅದರಿಂದ ಹಣ ಯಾರಿಗೆ ಹೋಗಿದೆ? ಎನ್ನುವುದು ಪತ್ತೆ ಮಾಡಲು ಹೋದರೆ ದೊಡ್ಡ ಕುಳವೇ ಬಲೆಗೆ ಬೀಳುತ್ತದೆ. ಹೀಗಾಗಿ ಆ ಕುಟುಂಬದವರು ಲೋಕಾ ದಾಳಿ ಬೆನ್ನಲ್ಲೇ ಕೇಸ್ ಸ್ಟ್ರಾಂಗ್ ಆಗದಂತೆ ನೋಡಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ. ಸದ್ಯಕ್ಕೆ ಅವರಿಗೆ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಹೆಜ್ಜೆ ಹೆಜ್ಜೆಗೂ ಲೂಟಿ ಹಣ ಹಂಚಿಕೆ
ಅಕ್ರಮ ಮರಳು ದಂಧೆಕೋರರು ಮರಳಿಗೆ ಮನ ಬಂದಂತೆ ಹಣ ವಸೂಲಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಮರಳುಗಾರಿಕೆಗೆ ಪರವಾನಗಿ ಪಡೆದ ಜಮೀನಿನಲ್ಲಿ ಮರಳು ಎತ್ತಿದರೆ ಮಾಲೀಕರಿಗೆ ಒಂದು ಲೋಡ್‌ಗೆ 4 ಸಾವಿರ ರೂ. ಮರಳು ದಂಧೆ ನಡೆಸುವವರಿಗೆ 8 ಸಾವಿರ ರೂ. ವಾಹನ ಮಾಲೀಕರು ಮಾರ್ಗ ಮಧ್ಯದ ಜಮೀನು ರಸ್ತೆ, ಸಹಕಾರ ನೀಡುವ ಅಧಿಕಾರಿಗಳು ಸೇರಿ ಸಾಗಿಸುವ ದೂರದ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಅಂದಾಜು ಒಂದು ಬ್ರಾಸ್‌ಗೆ 5 ಸಾವಿರ ರೂ. ಆಗುತ್ತದೆ. ನಾಲ್ಕು ಬ್ರಾಸ್ ಮರಳು ಇರುವ ಲೋಡ್‌ಗೆ 20 ಸಾವಿರ ರೂ. ವರೆಗೂ ಹೋಗುತ್ತದೆ. ಈ ಹಣದಲ್ಲಿ ಒನ್, ಟು, ಥ್ರೀ ನಿಮಯ ಪಾಲನೆ ಆಗುತ್ತದೆ. ಈ ಅಕ್ರಮದ ಹಣ ಹೆಜ್ಜೆ ಹೆಜ್ಜೆಗೂ ಹಂಚಿಕೆ ಆಗುತ್ತಲೇ ಇರುತ್ತದೆ.
ಇದು ಕೇವಲ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರ ನಡೆದಿರುವಂತದ್ದಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇತ್ತು. ಆಗ ಅವರ ಬೆಂಬಲಿಗರು, ಈಗ ಇವರ ಬೆಂಬಲಿಗರು ಅಷ್ಟೆ ವ್ಯತ್ಯಾಸ. ಅಕ್ರಮ ಅಂದೂ, ಇಂದೂ ಎರಡೂ ಒಂದೆ. ಬೆಲೆಯಲ್ಲಿ ಸ್ವಲ್ಪ ಹೆಚ್ಚಾಗಿದೆ ಅಷ್ಟೆ. ಹಿಂದೆ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಶಾಸಕರಿದ್ದಾಗಲೂ ಈ ಅಕ್ರಮ ಮರಳು ದಂಧೆ ನಡೆದಿತ್ತು ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ಹೇಳುತ್ತಾರೆ.