ಬಾಗಲಕೋಟೆ ನಗರದಲ್ಲಿ ಭಾನುವಾರ ಸಂಜೆ ರಾಷ್ಟ್ರ ಸೇವಿಕಾ ಸಮಿತಿಯ ವಾರ್ಷಿಕೋತ್ಸವದ ಅಂಗವಾಗಿ ಆಕರ್ಷಕ ಪಥಸಂಚಲನ ನಡೆಯಿತು. 
ಬಾಗಲಕೋಟೆ

ಮೌಲ್ಯಗಳ ಆಧಾರಿತ ಕುಟುಂಬಗಳ ಅಗತ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ರಾ.ಸೇ.ಸ. ವಕ್ತಾರೆ ವೇದಾ ಕುಲಕರ್ಣಿ ಅಭಿಮತ
  • ಮಹಿಳೆಯರು, ಬಾಲಕಿಯರಿಂದ ಪಥ ಸಂಚಲನ
  • ನಮ್ಮ ಮಕ್ಕಳಿಗೆ ವಿದೇಶಿ ಅನುಕರಣೆಯನ್ನು ಬಿಡಿಸಿ
ಬಾಗಲಕೋಟೆ: ನಮ್ಮ ಮಕ್ಕಳಿಗೆ ವಿದೇಶಿ ಅನುಕರಣೆಯನ್ನು ಬಿಡಿಸಿ, ನಾವೆಲ್ಲರೂ ನಮ್ಮದರ ತಿರುಳು ತಿಳಿದುಕೊಂಡು ಅದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ನಮ್ಮದು ಮೌಲ್ಯಗಳ ಆಧಾರಿತ ಕುಟುಂಬ ಆಗಬೇಕು ಎಂದು ವಿಜಯನಗರ ಪ್ರಾಂತ ಕಾರ್ಯವಾಹಿಕಾ ವಕ್ತಾರೆ ವೇದಾ ಕುಲಕರ್ಣಿ ಹೇಳಿದರು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ರಾಷ್ಟ್ರ ಸೇವಿಕಾ ಸಮಿತಿ ವಾರ್ಷಿಕೋತ್ಸವದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಕುಟುಂಬ ಆರೋಗ್ಯವಂತ ಇದ್ದಾಗ, ನಮ್ಮ ಸಮಾಜವೂ ಆರೋಗ್ಯವಂತವಾಗಿರುತ್ತದೆ. ಇದರಿಂದ ನಮ್ಮ ದೇಶವೂ ಆರೋಗ್ಯವಂತವಾಗಿರುತ್ತದೆ. ನಮ್ಮ ಯುವ ಜನಾಂಗದ ಅಂತರಂಗ ಅತ್ಯಂತ ಫಲವತ್ತಾಗಿದೆ. ಯಾವುದೇ ವಿಷಯವನ್ನು ಕೊಟ್ಟಾಗ ಅದನ್ನು ತಿಳಿದುಕೊಂಡು ಸ್ಪಂದಿಸುತ್ತಾರೆ. ಹೀಗಾಗಿ ಆ ಯುವ ಜನಾಂಗಕ್ಕೆ ಕೊಡುವ ನಮ್ಮ ವಿಚಾರಗಳು ಗಟ್ಟಿಯಾಗಿರಬೇಕು. ಇದರಿಂದ ಅವರು ಒಳ್ಳೆಯ ನಾಗರಿಕರಾಗಬೇಕು. ಅವರ ವ್ಯಕ್ತಿತ್ವ ವಿಕಾಸಗೊಳ್ಳಬೇಕು. ದೃಢವಾದ, ಸತ್ವ ಆಧಾರಿತ, ಅಂತರಂಗದ ಸೌಂದರ್ಯ ಬೆಳೆಸಬೇಕು ಎಂದರು.
ಇದೆಲ್ಲದರ ಫಲವೆಂದರೆ ಅವರೆಲ್ಲರೂ ನಮ್ಮ ರಾಷ್ಟ್ರದ ಒಳ್ಳೆಯ ಪ್ರಜೆಗಳಾಗಿ, ನಮ್ಮ ಕನಸಿನ ಭಾರತ ಆಗುತ್ತದೆ. ದೇಶದಲ್ಲಿ ಒಳ್ಳೆಯ ಬದಲಾವಣೆ ಬರುತ್ತದೆ. ಈಗ ಸಂಕ್ರಾಂತಿಯ ಸಮಯ. ಸಂಕ್ರಾಂತಿಗೆ ಒಳ್ಳೆಯ ಬದಲಾವಣೆ ಬರುತ್ತದೆ. ಅದರಲ್ಲಿ ನಾವು ಭಾಗಿಯಾಗೋಣ ಎಂದು ತಿಳಿಸಿದರು.
ದೇಶದಲ್ಲಿ ನಮ್ಮದು ಹಿಂದು ಸಂಸ್ಕೃತಿಗೆ ಪೂರಕವಾದ ಕುಟುಂಬ ಆಗಬೇಕು. ಹೀಗಾಗಿ ನಾವುಗಳು ಯುವಕರಿಗೆ ಒಳ್ಳೆಯ ಮಾರ್ಗವನ್ನು ತೋರಿಸುವ ಕೆಲಸ ಮಾಡಬೇಕಿದೆ. ಆಗ ನಮ್ಮ ಭಾರತ ದೇಶ ವಿಶ್ವಗುರು ಆಗುತ್ತದೆ ಎಂದು ಹೇಳಿದರು.
ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಸುರೇಖಾ ಮಠದ, ನಗರ ಕಾರ್ಯವಾಹಿಕಾ ಸುಮನ ರಜಪೂತ ವೇದಿಕೆಯಲ್ಲಿ ಇದ್ದರು.

ಆಕರ್ಷಕ ಪಥ ಸಂಚಲನ

ಬಹಿರಂಗ ಸಭೆಗೂ ಮುನ್ನ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಮಹಿಳೆಯರು ಹಾಗೂ ಬಾಲಕಿಯರು ನಗರದಲ್ಲಿ ಆಕರ್ಷಕವಾಗಿ ಘೋಷ ಸಹಿತ ಪಥ ಸಂಚಲನ ನಡೆಸಿದರು.
ಸಂಜೆ 4 ಗಂಟೆಗೆ ಬಸವೇಶ್ವರ ಮೈದಾನದಿಂದ ನೂರಾರು ಮಹಿಳೆಯರು ಪಥ ಸಂಚಲನ ಆರಂಭಿಸಿದರು. ಮೈದಾನದಿಂದ ಪಶು ಆಸ್ಪತ್ರೆ, ಟೇಕಿನಮಠ, ಶಾರದಾ ಪ್ರೆಸ್, ಹಳಪೇಟ ಮಡು ಸಿಂಹದ ಮೂರ್ತಿ, ಭಾವಸಾರ ಗಜಾನನ ಚೌಕ, ಕಿರಾಣಿ ಮಾರ್ಕೆಟ್, ಕಪ್ಪಡ ಬಜಾರ, ಪೊಲೀಸ್ ಚೌಕ್, ಟಾಂಗಾ ಸ್ಟಾೃಂಡ್, ಕಿಲ್ಲಾ ಕೊಪ್ಪ ದವಾಖಾನೆ, ಕಿಲ್ಲಾ ಶಿವಾಜಿ ಚೌಕ, ಕಾಯಿಪಲ್ಲೆ ಪೇಟೆ, ವಲ್ಲಭಭಾಯಿ ಚೌಕ, ಎಂಜಿ ರಸ್ತೆ, ಬಸವೇಶ್ವರ ವೃತ್ತ, ಸಾಸನೂರ ಪೆಟ್ರೋಲ್ ಬಂಕ್ ಮುಖಾಂತರ ಮರಳಿ ಬಸವೇಶ್ವರ ಮೈದಾನದಲ್ಲಿ ಮುಕ್ತಾಯವಾಯಿತು.
ರಾಷ್ಟ್ರ ಸೇವಿಕಾ ಸಮಿತಿ ವಾರ್ಷಿಕೋತ್ಸವ ನಿಮಿತ್ತವಾಗಿ ನಡೆದ ಪಥ ಸಂಚಲನ ವೀಕ್ಷಿಸಲು ಮಾರ್ಗದುದ್ದಕ್ಕೂ ಜನರು ಸಾಲಾಗಿ ನಿಂತಿದ್ದರು. ಘೋಷ ಸಹಿತ ಪಥ ಸಂಚಲನವೂ ಬಸವೇಶ್ವರ ವೃತ್ತಕ್ಕೆ ಬಂದಾಗ ಅಲ್ಲಿ ಸಾಕಷ್ಟು ಸಂಖ್ಯೆಯ ಜನರು ನೆರೆದಿದ್ದು, ಚಪ್ಪಾಳೆ ತಟ್ಟಿ ಸ್ವಾಗತಿಸಿದರು.