ಬಾಗಲಕೋಟೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನುಲಿಯ ಚಂದಯ್ಯ ಕಾರ್ಯಕ್ರಮವನ್ನು ಪರಿಷತ್ ಶಾಸಕ ಪಿ.ಎಚ್.ಪೂಜಾರ ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಸಮುದಾಯದ ಮುಖಂಡರು ಇದ್ದರು.
ಶರಣರ ತತ್ವ, ಆದರ್ಶ ಹಾಗೂ ವಚನ ಸಂದೇಶಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿವೆ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
೧೨ನೇ ಶತಮಾನದ ಶರಣ ಪರಂಪರೆಯಲ್ಲಿ ನುಲಿಯ ಚಂದಯ್ಯನವರು ಕಾಯಕಕ್ಕೆ ವಿಶೇಷ ಮಹತ್ವ ನೀಡಿದ ಮಹಾನ್ ಶರಣರಾಗಿದ್ದರು. ಅವರ ಕಾಯಕ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾನತೆಯ ಸಂದೇಶ ಹಾಗೂ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ದುಡಿಮೆಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಕಾಯಕವೇ ಕೈಲಾಸ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಸಂದೇಶವನ್ನು ಶರಣರು ನೀಡಿದ್ದಾರೆ. ನುಲಿಯ ಚಂದಯ್ಯ ಅವರ ಜೀವನವು ಕಾಂiÀiಕದ ಮಹತ್ವ ಹಾಗೂ ಆತ್ಮಗೌರವದ ಪ್ರತೀಕವಾಗಿದೆ ಎಂದು ಹೇಳಿದರು.
ಜಿಲ್ಲಾಽಕಾರಿ ಸಂಗಪ್ಪ ಮಾತನಾಡಿ, ನುಲಿಯ ಚಂದಯ್ಯನವರು ಶರಣ ಪರಂಪರೆಯ ಅಪರೂಪದ ಕಾಯಕಯೋಗಿ. ಅವರು ತಮ್ಮ ಕಾಯಕವನ್ನು ಕೇವಲ ಜೀವನೋಪಾಯ ಎಂದು ಭಾವಿಸಿರಲಿಲ್ಲ. ಕಾಯಕವೇ ಕೈಲಾಸ, ಪ್ರಾಮಾಣಿಕವಾಗಿ ಮಾಡಿದ ಕೆಲಸವೇ ಪೂಜೆ ಎಂಬ ಭಾವನೆಯೊಂದಿಗೆ ಬದುಕಿದವರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ, ಶ್ರಮದ ಗೌರವ, ಶಿಕ್ಷಣ ಮತ್ತು ಮಾನವೀಯತೆಯ ಆಧಾರದ ಮೇಲೆ ಶಕ್ತಿಶಾಲಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸ ನೀಡಿದ ಸಾಹಿತಿ ಶಿವಾನಂದ ಭಜಂತ್ರಿ, ನುಲಿಯ ಚಂದಯ್ಯನವರ ನಡೆದು ಬಂದ ಹಾದಿಯ ಬಗ್ಗೆ ವಿವರವಾಗಿ ತಿಳಿಸುತ್ತಾ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಉತ್ತಮ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಉಪ ವಿಭಾಗಾಽಕಾರಿ ಕ್ಯಾಪ್ಟನ ಮಹೇಶ ಮಾಲಗಿತ್ತಿ, ತಹಸೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ಸಮುದಾಯದ ಮುಖಂಡರಾದ ಭೀಮಸಿ ತಿಪ್ಪಲಕಟ್ಟಿ, ರಾಜು ಮನ್ನಿಕೇರಿ, ರಮೇಶ ಭಜಂತ್ರಿ, ಬಾಬು ಭಜಂತ್ರಿ, ಸುರೇಶ ಭಜಂತ್ರಿ ಹಾಗೂ ಇತರರು ಉಪಸ್ಥಿತರಿದ್ದರು.