ಇದ್ದಲಗಿ ಗ್ರಾಮದಲ್ಲಿ ಅಗ್ನಿ ದುರಂತದಲ್ಲಿ ಸುಟ್ಟು ಹೋಗಿರುವ ಶೆಡ್‌ಗಳ ಎದುರು ಸಂತ್ರಸ್ತರು.
ಮೊದಲೇ ಪ್ರಕೃತಿ ವಿಕೋಪಕ್ಕೆ ಸಿಲುಕಿ ಬದುಕು ನುಚ್ಚು ನೂರಾಗಿದ್ದ ಅವರ ಬದುಕು ಇನ್ನೂ ಸುಧಾರಿಸಿಯೇ ಇಲ್ಲ. ೧೮ ವರ್ಷಗಳ ವನವಾಸಕ್ಕೆ ತೆರೆಬೀಳಲಿ ಎಂದು ೧೧೮ ದಿನಗಳಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಆ ಸಂತ್ರಸ್ತರಿಗೆ ಬೇಡಿಕೆ ಈಡೇರುವ ಮುನ್ನವೇ ಇದೀಗ ಬದುಕಿನಲ್ಲಿ ಮತ್ತೊಂದು ವಿಕೋಪ ಅಟ್ಟಹಾಸ ಮೆರೆದಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜೀವ ಉಳಿದರೂ ಜೀವನ ಸುಟ್ಟು ಭಸ್ಮವಾಗಿದೆ.
ಹೌದು, ಇದು ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಿಕ್ಕು ಸುಟ್ಟು ಬೂದಿಯಾಗಿರುವ ೨೯ ಶೆಡ್ ನಿವಾಸಿಗಳ ಶೋಚನೀಯ ಸ್ಥಿತಿ!
ಶ್ರಾವಣ ಮಾಸದ ನಿಮಿತ್ಯ ನಡೆಯುತ್ತಿರುವ ಪ್ರವಚನ ಆಲಿಸಲು ಶೆಡ್ ನಿವಾಸಿಗಳು ತೆರಳಿದ್ದರು. ಇತ್ತ ಅವರಿದ್ದ ಶೆಡ್‌ಗಳಿಗೆ ದಿಢೀರನೇ ಕಾಣಿಸಿಕೊಂಡಿದ್ದ ಬೆಂಕಿ ನೋಡ ನೋಡುತ್ತಲೇ ಎಲ್ಲವನ್ನು ಸುಟ್ಟು ಹಾಕಿದೆ. ಅವರು ವಾಸವಾಗಿದ್ದ ಶೆಡ್ ಮಾತ್ರವಲ್ಲ, ಆ ಬೆಂಕಿಗೆ ಆ ಕುಟುಂಬಗಳ ಬದುಕೇ ಭಸ್ಮವಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ.
ಹೊಟ್ಟೆ ತುಂಬಿಸಿಕೊಳ್ಳಲು ಇಟ್ಟಿದ್ದ ದವಸ-ಧಾನ್ಯ, ಅಡುಗೆ ಮಾಡಲು ಇದ್ದ ಪಾತ್ರೆ-ಪಗಡೆಗಳು, ಹಾಕಿಕೊಳ್ಳಲು ಇದ್ದ ಬಟ್ಟೆ ಬರಿಗಳು, ಹೊದ್ದು ಮಲಗಲು ಇದ್ದ ಹಾಸಿಗೆ-ದಿಂಬುಗಳು ಹೀಗೆ, ಕಷ್ಟಪಟ್ಟು ದುಡಿದು ಡಬ್ಬಾಗಳಲ್ಲಿ ಕೂಡಿಟ್ಟಿದ್ದ ಅಲ್ಪಸ್ವಲ್ಪ ದುಡ್ಡು ಎಲ್ಲ ಅಂದರೆ ಎಲ್ಲವೂ ಆ ಬೆಂಕಿಯ ಆರ್ಭಟದಲ್ಲಿ ಸುಟ್ಟು ಬೂದಿಯಾಗಿ ಹೋಗಿವೆ.
ಬೆಂಕಿಯಲ್ಲಿ ಸುಟ್ಟು ಹೋಗಿರುವ ತಮ್ಮ ಬದುಕು ನೆನೆದು ಕಣ್ಣೀರು ಹಾಕುತ್ತಿರುವ ಆ ನತದೃಷ್ಟ ಸಂತ್ರಸ್ತರ ಕಣ್ಣೀರು ಹೃದಯ ಕಲುಕುತ್ತಿದೆ. ಪ್ರವಚನದಲ್ಲಿ ಇದ್ದಿದ್ದಕ್ಕೆ ಜೀವ ಉಳಿಯಿತೇನೋ ಸರಿ! ಆದರೆ, ಜೀವನ ನಡೆಸಲು ಬೇಕಿದ್ದ ಎಲ್ಲವೂ ಬೂದಿಯಾಗಿ ಹೋಯಿತಲ್ಲ ಎನ್ನುವ ಅವರ ಆರ್ತನಾದ ಸಾಂತ್ವನ ಹೇಳಲು ಹೋಗಿದ್ದವರ ಕಣ್ಣು ತೇವಗೊಳಿಸುತ್ತಿದ್ದವು.
ಗ್ರಾಮದ ಹನಮಂತಪ್ಪ ಚಲವಾದಿ ಎನ್ನುವವ ಕುಟುಂಬದಲ್ಲಿ ಪ್ರತಿಯೊಬ್ಬರ ಗೋಳಾಟ ಹೇಳತೀರದು. ಇದೇ ಸೆಪ್ಟಂಬರ್ ೧೩ ರಂದು ಕುಟುಂಬದ ಮಗಳ ಮದುವೆ ನಿಶ್ವಯವಾಗಿತ್ತು. ಮದುವೆಗೆಂದೇ ಸಾಲ ಮಾಡಿ, ೨ ತೊಲೆ ಚಿನ್ನ, ೫ ತೊಲೆ ಬೆಳ್ಳಿ, ಮೂರು ಲಕ್ಷ ರೂ. ನಗದು ಹಾಗೂ ಮದುವೆಗೆಂದು ತಂದಿದ್ದ ೨೦ ಸೀರೆಗಳನ್ನು ತಂದು ಇಟ್ಟಿದ್ದರು. ರಾತ್ರಿ ಪ್ರವಚನ ಕೇಳಲೆಂದು ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಇತ್ತ ಶೆಡ್‌ಗೆ ಬೆಂಕಿ ಬಿದ್ದು, ಎಲ್ಲವೂ ಸುಟ್ಟು ಹೋಗಿವೆ. ಈಗ ಮಗಳ ಮದುವೆ ಹೇಗೆ ಮಾಡೋದು ಎಂದು ವೃದ್ಧೆ ಅಜ್ಜಿ, ತಾಯಿ ಗೀತಾ ಉಳಿದ ಸದಸ್ಯರು ಕಣ್ಣೀರು ಹಾಕುತ್ತಿದ್ದರು. ಸೆ. ೧೩ ರಂದು ಗ್ರಾಮದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದಲ್ಲಿ ಮದುವೆ ನಡೆಯಲಿತ್ತು. ಈಗ ಬೆಂಕಿಯ ಚೆಲ್ಲಾಟಕ್ಕೆ ಸಿಕ್ಕು ಮದುವೆಗಾಗಿ ತಂದಿದ್ದ ವಸ್ತುಗಳು, ಹಣ ಎಲ್ಲವೂ ನಾಶವಾಗಿದೆ. ಮೈಮೇಲೆ ಇರುವ ಬಟ್ಟೆ ಬಿಟ್ಟರೆ ಏನೂ ಉಳಿದಿಲ್ಲ ಎಂದು ಗೀತಾ ಅವರು ಕಣ್ಣೀರು ಹಾಕುತ್ತಲೇ ಇದ್ದರು.
ಇದು ಒಂದು ಕುಟುಂಬದ ಕಣ್ಣೀರಲ್ಲ. ಶೆಡ್‌ಗೆ ಬಲಿಯಾಗಿರುವ ೨೯ ಶೆಡ್‌ಗಳ ಸಂತ್ರಸ್ತರ ಪಾಡು ಹೀಗೆಯೇ ಆಗಿದೆ. ಮತ್ತೊಂದು ಮನೆಯಲ್ಲಿ ಇದ್ದ ೨೦ ಚೀಲ ಜೋಳವೂ ಸುಟ್ಟು ಕರಕಲಾಗಿದ್ದು, ಹೊಟ್ಟೆಗೆ ರೊಟ್ಟಿಯೂ ಇಲ್ಲದಂತಾಗಿದೆ. ಇನ್ನು ಶಾಲಾ ಮಕ್ಕಳ ಪಠ್ಯ, ಪುಸ್ತಕಗಳೆಲ್ಲವೂ ಸುಟ್ಟು ಹೋಗಿವೆ. ಕೃಷಿ ಪರಿಕರಗಳು ಹಾಳಾಗಿವೆ. ಆ ೨೯ ಶೆಡ್‌ಗಳ ನಿವಾಸಿಗಳ ಬಳಿಗೆ ಈಗ ಏನೂ ಉಳಿದಿಲ್ಲ. ಮುಂದೆ ಬದುಕು ಕಟ್ಟಿಕೊಳ್ಳೋದು ಹೇಗೆ ಎನ್ನುವುದು ಆವರ ಮುಖಗಳಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು.