ಗುಳೇದಗುಡ್ಡ ಸಮೀಪದ ಕೋಟೆಕಲ್ ಗ್ರಾಮದ ಹಿರೇಹಳ್ಳದ ದಿಡಿಗಿನಕೆರೆ ಸಂಪೂರ್ಣ ಬತ್ತಿ ಒಣಗಿರುವುದು.
- ರೈತರು, ಜಾನುವಾರು ಸಾಕಾಣಿಕೆದಾರರು ತೀವ್ರ ಸಂಕಷ್ಟಕ್ಕೆ
- ಪರಿಸರ ಪ್ರೇಮಿಗಳಿಂದ ಬೇಸರ
ಬಸವರಾಜ ಸಿಂದಗಿಮಠ ಗುಳೇದಗುಡ್ಡ
ಒಂದು ಕಾಲಕ್ಕೆ ಮೈತುಂಬಿಕೊಂಡು ನಳನಳಿಸುತ್ತಿದ್ದ ಕೆರೆ ಇಂದು ಖಾಲಿ ಖಾಲಿಯಾಗಿ ಕಣ್ಣೀರು ಹಾಕುತ್ತಿದೆ. ಸುತ್ತಮುತ್ತಲಿನ ಪರಿಸರ, ಅಂತರ್ಜಲ, ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ್ದ ಕೆರೆ ಮಳೆಗಾಲದಲ್ಲಿಯೂ ಒಣಗಿ ಹೋಗಿದೆ. ಪರಿಸರ ಪ್ರೇಮಿಗಳು ಈ ಕೆರೆ ಅಂಗಳ ಪರಿಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಮೀಪದ ಕೋಟೆಕಲ್ ಗ್ರಾಮದ ಹಿರೇಹಳ್ಳದ ದಿಡಿಗಿನಕೆರೆ ಸಂಪೂರ್ಣ ಒಣಗಿದ್ದು, ಈ ಜಾಗದಲ್ಲಿ ಮಳೆಯ ಕೊರತೆಯಿಂದ ರೈತರು ಹಾಗೂ ಜಾನುವಾರು ಸಾಕಾಣಿಕೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. 100 ಎಕರೆ ಪ್ರದೇಶದಲ್ಲಿ ಈ ಕೆರೆ ಸದ್ಯ ಸಂಕಷ್ಟಕ್ಕೆ ಸಿಲುಕಿದೆ.
ಈ ವರ್ಷ ಮುಂಗಾರು ಅರ್ಧ ಕಳೆದರೂ ಸಮರ್ಪಕ ಮಳೆಯಾಗದ ಕಾರಣ ಕೋಟೆಕಲ್ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. 200ಕ್ಕೂ ಹೆಚ್ಚು ಎಕರೆ ಪ್ರದೇಶದ ಕೃಷಿಭೂಮಿಗೆ ನೀರಾವರಿ ಒದಗಿಸುತ್ತಿದ್ದ ಹಿರೇಹಳ್ಳದ ದಿಡಿಗಿನಕೆರೆ ಈಗ ಸಂಪೂರ್ಣ ಒಣಗಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬೇಸಿಗೆ ವೇಳೆಗೆ ಕುಡಿಯುವ ನೀರು ಹಾಗೂ ಜಾನುವಾರುವಿಗೆ ಮೇವು-ನೀರಿನ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಇದೆ.
ಈ ಹಿಂದೆ ಬಾದಾಮಿ ಕ್ಷೇತ್ರದ ಆಗಿನ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಭಾಗಕ್ಕೆ ಕೆರೆತುಂಬಿಸುವ ಯೋಜನೆಯ ಭರವಸೆ ನೀಡಿದ್ದರು. ಆದರೆ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಗುಡ್ಡಗಾಡು ಪ್ರದೇಶವಾಗಿರುವ ಈ ಜಾಗದಲ್ಲಿ ನೀರಾವರಿ ಸೌಲಭ್ಯ ಅತ್ಯಂತ ಅಗತ್ಯವಾಗಿದ್ದು, ರೈತರ ಕನಸು ಇನ್ನೂ ನನಸಾಗಿಲ್ಲ.
40 ವರ್ಷಗಳ ಹಿಂದೆ ಕುಡಿಯುವ ನೀರು ಹಾಗೂ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಕೆರೆಯನ್ನು ಪುನರುಜ್ಜೀವನಗೊಳಿಸಿ, ಕೆರೆ ತುಂಬಿಸುವ ಯೋಜನೆಯನ್ನು ಜಾರಿಗೆ ತರಬೇಕು. ಮುಂಗಾರು ಮಳೆ ಇದೇ ರೀತಿಯಾಗಿ ಕೈಕೊಟ್ಟರೆ ರೈತರ ಬದುಕಿನ ಜೊತೆಗೆ ದನಕರು, ಕುರಿ, ಮೇಕೆ ಹಾಗೂ ಇತರ ಮೂಕ ಪ್ರಾಣಿಗಳ ಜೀವವೂ ಸಂಕಷ್ಟಕ್ಕೆ ಸಿಲುಕಲಿದೆ ಎಂಬುದು ಇಲ್ಲಿನ ರೈತರ ಆತಂಕವಾಗಿದೆ.
ಕೋಟೆಕಲ್ ಗ್ರಾಮದ ಹಿರೇಹಳ್ಳದ ದಿಡಿಗಿನಕೆರೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ನೀರು ಇಲ್ಲದೆ ಅನೇಕ ವರ್ಷಗಳಿಂದ ಒಣಗಿ ಹೋಗಿದೆ. ಕೆರೆಗೆ ನೀರು ಹರಿಸುವ ಭರವಸೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದರು. ಇಂದಿಗೂ ಸಾಕಾರಗೊಂಡಿಲ್ಲ. ರೈತರು, ಪರಿಸರ ಪ್ರೇಮಿಗಳು, ಜನ ಜಾನುವಾರುಗಳ ಸಂಕಷ್ಟ ಅರಿತು ಸರ್ಕಾರ ಕೆರೆ ತುಂಬಿಸಲು ಮುಂದಾಗಬೇಕು.
— | ಹನುಮಂತ ಮಾವಿನಮರದ ಜೆಡಿಎಸ್ ಜಿಲ್ಲಾಧ್ಯಕ್ಷ