ವಿಜಯವಾಣಿ ಸುದ್ದಿಜಾಲ ಮಹಾಲಿಂಗಪುರ
ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ, ವಿವಿಧ ಬಣ್ಣಗಳ ಪುಷ್ಪಗಳ ಅಲಂಕಾರ, ಲಕ್ಷಾಂತರ ಭಕ್ತರ ಜಯಘೋಷ ಹಾಗೂ ಹರ್ಷೋದ್ಗಾರಗಳ ಮಧ್ಯ ಶನಿವಾರ ಸಂಜೆ ಭಾವೈಕ್ಯ ನಗರಿಯ ಭಾಗ್ಯದಾತ ಮಹಾಲಿಂಗೇಶ್ವರರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ರಥೋತ್ಸವಕ್ಕೂ ಮುನ್ನ ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಕರಡಿ ಮಜಲು, ಕಂಗೊಳಿಸುತ್ತಿದ್ದ ನಂದಿಕೋಲು, ಭಕ್ತರ ಹರ್ಷೋದ್ಘಾರದ ನಡುವೆ ಅತ್ಯಂತ ಸಂಭ್ರಮ-ಸಡಗರದಿಂದ ಜರುಗಿತು. ರಥೋತ್ಸವದ ನಿಮಿತ್ಯ ಪಟ್ಟಣದ ಎಲ್ಲ ರಸ್ತೆಗಳು ಜನ-ಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಜವಳಿಬಜಾರ, ಮಹಾಲಿಂಗೇಶ್ವರ ದೇವಸ್ಥಾನ, ಚನ್ನಗಿರೇಶ್ವರ ದೇವಸ್ಥಾನ, ಚನ್ನಮ್ಮ ವೃತ್ತ, ಅನ್ನಪೂರ್ಣೇಶ್ವರಿ ದೇವಸ್ಥಾನ, ಬುದ್ನಿ ಮಹಾಲಿಂಗೇಶ್ವರ ದೇವಸ್ಥಾನ ಸೇರಿ ಹಲವೆಡೆ ಬಯಲಾಟ, ಶ್ರೀಕೃಷ್ಣ ಪಾರಿಜಾತ, ಭಜನೆಗಳು, ರಸಮಂಜರಿ ಕಾರ್ಯಕ್ರಮಗಳು, ಶ್ರೀಕೃಷ್ಣ ಪಾರಿಜಾತ ಬೈಲಾಟ ಪ್ರದರ್ಶನಗಳು ಜರುಗಿದವು.
ರಥೋತ್ಸವದ ಮುನ್ನ ಹರಿವಾಣ ಕಟ್ಟೆ ಲೂಟಿ: ತುಂಬಿದ ರಥ ಸಾಗುವ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಯ ಎದುರು ನಿರ್ಮಿಸಲಾದ ಹರಿವಾಣ ಕಟ್ಟೆಯ ಲೂಟಿ ಕಾರ್ಯಕ್ರಮ ಜರುಗಿತು. ನೂರಾರು ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಗೋವಿನ ಜೋಳ, ಬಾಳೆಗಿಡ, ಕಬ್ಬು ಸೇರಿ ಹಲವು ತರಹದ ಬೆಳೆಗಳನ್ನು ತಂದು ಪಾದಗಟ್ಟೆಯ ಮುಂದಿನ ಹಂದರ ಮೇಲೆ ಇರಿಸಿದ್ದರು. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿದ ನಂತರ ಸಂಪ್ರದಾಯದಂತೆ ಹರಿವಾನ ಕಟ್ಟೆಯಲ್ಲಿನ ಕಬ್ಬು, ಗೋವಿನ ಜೋಳದ ತೆನೆ, ಇತ್ಯಾದಿಗಳನ್ನು ಅಲ್ಲಿ ಜಮಾಯಿಸಿದ ಸಾವಿರಾರು ಭಕ್ತರು ದೋಚಿಕೊಂಡು ಹೋದರು.
ಹರಿವಾನ ಕಟ್ಟೆಯಿಂದ ದೋಚಿಕೊಂಡು ಹೋದ ಕಬ್ಬು, ಗೋವಿನ ಜೋಳದ ದಂಟನ್ನು ಮನೆ, ಅಂಗಡಿಗಳಲ್ಲಿ ಕಟ್ಟಿ, ಮುಂದಿನ ವರ್ಷದ ಜಾತ್ರೆಯವರೆಗೂ ಅದನ್ನು ಪೂಜಿಸಲಾಗುತ್ತದೆ. ಈ ಪೂಜೆಯಿಂದ ರೈತರಿಗೆ ಹೊಲದಲ್ಲಿ, ಭಕ್ತರಿಗೆ ಮನೆಯಲ್ಲಿ ಅನ್ನದ ಕೊರತೆಯಾಗುವದಿಲ್ಲ ಎನ್ನುವ ಪ್ರತೀತಿ ಭಕ್ತರಲ್ಲಿದೆ.
ಅನ್ನ ಸಂತರ್ಪಣೆ: ಮಹಾಲಿಂಗೇಶ್ವರ ಮಹಾಜಾತ್ರೆಯ ನಿಮಿತ್ತ ಮಹಾಲಿಂಗಪುರ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶುಕ್ರವಾರ ರಾತ್ರಿ 10ರಿಂದ ಶನಿವಾರವಾರ ಸಂಜೆಯವರೆಗೂ ಮಕ್ಕಳು, ಮಹಿಳೆಯರು. ವಯಸ್ಕರು ಪವಿತ್ರ ಬಸವತೀರ್ಥದಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀಮಠದ ವರೆಗೆ ದೀಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು. ಮುಸ್ಲಿಂ ಸಮುದಾಯದವರು ಸಹ ದೀಡ ನಮಸ್ಕಾರ ಹಾಕಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದರು.
ಈ ಬಾರಿ ಬಸವತೀರ್ಥಕ್ಕೆ ಹೋಗುವ ರಸ್ತೆಯಲ್ಲಿ ವಿವಿಧ ಬಣ್ಣಗಳಿಂದ ಅಲಂಕೃತ ಫ್ಲೆವರ್‌ಬ್ಲಾಕ್ ಅಳವಡಿಸಿದ್ದು ವಿಶೇಷವಾಗಿದೆ. ಬಹುಪರಾಕ ಕೈಪಿಡಿ, ಈ ಮಧ್ಯ ಶುಕ್ರವಾರ ಮಹಾಲಿಂಗೇಶ್ವರ ಬಹುಪರಾಕ ಕೈಪಿಡಿ ಮಹಾಲಿಂಗೇಶ್ವರ ಶ್ರೀಗಳು ಬಿಡುಗಡೆಗೊಳಿಸಿದರು. ಅಂದು ಅಖಂಡ ಜ್ಯೋತಿ ಧೂಪ ದೀಪ ಕಾರ್ಯಕ್ರಮದಡಿ 6 ಅಡಿ ಉದ್ದದ ಅಗರಬತ್ತಿ ಬೆಲಗುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಎಂ.ಐ.ಕೋಳಿಗುಡ್ಡ, ಚನ್ನಪ್ಪ ಪಟ್ಟಣಶೆಟ್ಟಿ, ಕೃಷ್ಣಗೌಡ ಪಾಟೀಲ, ವಿಶ್ವ ಹಿರೇಮಠ ಇದ್ದರು.