ಮುಧೋಳ: ಬರದಿಂದ ತತ್ತರಿಸಿರುವ ರೈತರಿಗೆ ಎಕರೆಗೆ ೫೦ ಸಾವಿರ ರೂ. ದವರೆಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಹಾಗೂ ಅರ್ಹ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಸೇರಿ ೧೩ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿವಸೇನಾ ಕರ್ನಾಟಕದ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ ಅವರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.
ಶಿವಸೇನಾ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಗಾಂವಿ ಮಾತನಾಡಿ, ಬರಪೀಡಿತ ರೈತರ ಸಂಕಷ್ಟಕ್ಕೆ ಸರ್ಕಾರಗಳು ತಕ್ಷಣ ಸ್ಪಂದಿಸಬೇಕು. ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವುದರ ಜತೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ೧೨ ಗಂಟೆ ವಿದ್ಯುತ್ ಪೂರೈಸಬೇಕು. ಸರ್ಕಾರಿ ಖರೀದಿ ಕೇಂದ್ರಗಳಲ್ಲಿ ಬಾಕಿ ಇರುವ ಹಣವನ್ನು ಪಾವತಿಸಬೇಕು. ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸುವುದು, ಕೃಷಿ ಕಾರ್ಮಿಕರಿಗೆ ಉಚಿತ ಪಡಿತರ ವಿತರಿಸುವುದು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಬರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಸೇರಿ ಗ್ರಾಮೀಣ ಜನರ ಬದುಕಿಗೆ ನೆರವಾಗುವ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಬೇಕು. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತರ ಬೇಡಿಕೆಗಳ ಕುರಿತು ಸರ್ಕಾರ ಕಾಲಮಿತಿಯ ಕ್ರಮಯೋಜನೆ ರೂಪಿಸಿ, ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದರು.
ತಿಮ್ಮನಗೌಡ ಪಾಟೀಲ, ಗಣೇಶ ಪೂಜಾರಿ, ಸಿದ್ದು ಮಾಯಪ್ಪಗೊಳ, ಮಾದು ತೇಲಿ, ಅಡವೇಶ ರೂಗಿ, ಮಾಂತು ಜೀರಗಾಳ, ಮಂಜುಗೌಡ ಕೊರಡ್ಡಿ, ಕರೆಪ್ಪ ಯಾದವಾಡ, ಸುರೇಶ ಯಾಪಾರಿ, ಕೃಷ್ಣ ಕಡಪಟ್ಟಿ, ಪರಮಾನಂದ ಹೂಗಾರ ಹಾಗೂ ಪರಮಾನಂದ ಕೊಣ್ಯಾಗೊಳ ಉಪಸ್ಥಿತರಿದ್ದರು.