ಹುನಗುಂದ: ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಬೆನ್ನೆಲುಬಾಗಿ ನಿಂತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಕಡಲೆ, ತೊಗರಿ, ಸೂರ್ಯಕಾಂತಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ. ಆದರೆ, ಕೇಂದ್ರ ಸರ್ಕಾರ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ರೈತರಿಗೆ ನೀಡುವ ಕೆಲಸ ಇದುವರೆಗೂ ಮಾಡುತ್ತಿಲ್ಲ. ೨೦೨೨-೨೩ರಲ್ಲಿ ರಾಜ್ಯವು ಬರ ಎದುರಿಸಿದರು. ಕೇಂದ್ರ ಸರ್ಕಾರವು ಯಾವುದೇ ಪರಿಹಾರ ನೀಡಿರಲಿಲ್ಲ. ೧೩೪ ಜನ ಶಾಸಕರು ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳಿಗೆ ಭೇಟಿಯಾಗಿ ರಾಜ್ಯ ಸರ್ಕಾರಕ್ಕೆ ಪರಿಹಾರ ಹಣ ನೀಡಿ ಮನವಿ ಮಾಡಿಕೊಂಡರೂ ನೀಡಲಿಲ್ಲ. ನಮ್ಮ ರಾಜ್ಯಕ್ಕೆ ಬರುವಂತಹ ಜಿಎಸ್‌ಟಿ ತೆರಿಗೆ ಹಣ, ರೈತರಿಗೆ ಎಂಆರ್‌ಪಿ ಹಣ ನಿಗದಿಮಾಡಲಿಲ್ಲ. ಕಬ್ಬು ಬೆಳೆಗಾರರಿಗೆ ಕನಿಷ್ಠ ಬೆಲೆ ಕೇಂದ್ರ ಸರ್ಕಾರ ನಿಗದಿಮಾಡಿಲ್ಲ ಎಂದು ಆರೋಪಿಸಿದರು.
ನಮ್ಮ ಸರ್ಕಾರವು ರೈತರಿಗೆ ಎರಡು ಹೊಸ ಯೋಜನೆ ಜಾರಿಗೊಳಿಸಿದೆ. ಮುಖ್ಯ ಮಂತ್ರಿ ನೇಗಿಲು ಯೋಗಿ ಯೋಜನೆ. ಇದರಿಂದ ಸಣ್ಣಪುಟ್ಟ ರೈತರಿಗೆ ಅನುಕೂಲವಾಗಲಿದೆ, ಟ್ರ‍್ಯಾಕ್ಟರ್ ಮೂಲಕ ಉಚಿತವಾಗಿ ಉಳುಮೆ ಮಾಡಿಕೊಡುವ ಯೋಜನೆ ಇದಾಗಿದೆ. ನಗರದ ಯುವಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ರೈತರ ಪರಿಸ್ಥಿತಿ ಅನುಭವದ ಅರಿವು ಮೂಡಿಸಲು ರೈತರಿಗೆ ಗ್ರಾಮ ಅನುಭವ ಕಾರ್ಯಕ್ರಮ ಜಾರಿಗೆ ತರಲಾಯಿತು. ರೈತರ ಪರವಾಗಿ ಅನೇಕ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಪ್ರಜಾಸೇವಾ ಯೋಜನೆಯಿಂದ ಎಲ್ಲ ಇಲಾಖೆಯ ಅಽಕಾರಿಗಳು ನಿಮ್ಮ ಮನೆಗೆ ಆಗಮಿಸಿ ತಕ್ಷಣವೇ ಅಲ್ಲಿ ನಿಮ್ಮ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಭಾರತ ಜೋಡೋ ಯೋಜನೆ ಕಬಡ್ಡಿ, ಖೋಖೋ ಆಟಗಳಿಗೆ ಸೇರಿ ಯುವಕರಿಗೆ ಉತ್ತೇಜನ ನೀಡಲು ನಗರ, ಗ್ರಾಮಗಳಲ್ಲಿ ನೇರವಾಗಿ ಸರ್ಕಾರದಿಂದ ೧೦ ಲಕ್ಷ ರೂ. ಅನುದಾನ ಬರಲಿದೆ ಎಂದು ತಿಳಿಸಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಸಂಜೀವ ಜೋಶಿ, ನಿರ್ದೇಶಕರಾದ ಪ್ರಭು ಇದ್ದಲಗಿ, ವಿಜಯಮಹಾಂತೇಶ ಮಲಗಿಹಾಳ, ಬಸವರಾಜ ಹೊಸಮನಿ, ಶರಣಪ್ಪ ಅರಸಿಬೀಡಿ, ನಾಗಪ್ಪ ಬೀಳಗಿ, ಶಿವಾನಂದ ಕಂಠಿ, ಮುಖಂಡರಾದ ಗುರು ಗಾಣಿಗೇರ, ಮಲ್ಲಣ್ಣ ತುಂಬದ, ರಸುಲಸಾಬ ತಹಸೀಲ್ದಾರ್, ಬಸವರಾಜ ಪೈಲ, ಚನ್ನಪ್ಪ ಕರಂಡಿ, ಮಲ್ಲಪ್ಪ ಸುಂಕದಕಟ್ಟಿ ಇದ್ದರು.