ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
ಬಾಗಲಕೋಟೆ: ದೇಶದಲ್ಲಿ ಈಗಲೂ ರಾಮ ಭಕ್ತರ ಸರ್ಕಾರ ಇದೆ. ರಾಮಭಕ್ತರ ಭಾವನೆ ದುರುಪಯೋಗ ಪಡಿಸಿಕೊಂಡು ಅವರ ಮನಸ್ಸು ಘಾಸಿ ಮಾಡಿರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಕಾಣಿಕೆ ದೋಚಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
ರಾಮ ಮಂದಿರದ ಬಗ್ಗೆ ಈಗ ಕಾಳಜಿ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಕಾಳಜಿ, ಭಕ್ತಿ ಇದ್ದರೆ ಅವರು ಈ ದೇಶದಲ್ಲಿ ಅಕ್ರಮಣ ಮಾಡಿ ದೇಗುಲ ದ್ವಂಸ ಮಾಡಿ ಮಸೀದಿ, ಮದರಸಾಗಳನ್ನು ಕೆಡವಿ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡುವ ನಿರ್ಣಯ ಮಾಡಿ ತಮ್ಮ ತಾಕತ್ತು ಮತ್ತು ಭಕ್ತಿಯನ್ನು ತೋರಿಸಲಿ ಎಂದು ಸವಾಲು ಎಸೆದರು.
ರಾಮ ಮಂದಿರ ಕಾಣಿಕೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ರಾಮ ಭಕ್ತರಾದ ನಮಗೆ ಸಂಕಟ ಆಗಿದೆ. ಅದೇ ರಾಮ ಮಂದಿರ ವಿರೋಧ ಮಾಡಿದ್ದ(ಕಾಂಗ್ರೆಸ್)ವರು ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಕಾಣಿಕೆ ದುರುಪಯೋಗ ಆಗಿದೆ ಎಂದು ದೂರು ಕೊಟ್ಟವರು ಟ್ರಸ್ಟ್ನವರು. ಆ ದೂರಿನ ಮೇಲೆ ಎಸ್‌ಐಟಿ ರಚನೆ ಆಗಿದೆ. ಆದರೆ, ಕಾಂಗ್ರೆಸ್‌ನವರು ಮೋದಿ, ಷಾ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಅಂದು ಮಂದಿರ ನಿರ್ಮಾಣ ಸಹಿಸಲಾಗದ ಕಾಂಗ್ರೆಸ್‌ನವರು ಇಂದು ಸಂಭ್ರಮ ಪಡುತ್ತಿದ್ದಾರೆ ಎಂದು ರವಿ ಕೈ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಗೆ ನೋಡಿದರೆ ದೇಶದಲ್ಲಿ ಸಮೃದ್ಧವಾಗಿದ್ದ ಲಕ್ಷಾಂತರ ದೇವಾಲಯಗಳಿಗೆ ಒಂದು ಕಾಯ್ದೆಯ ಮೂಲಕ ಬಡ ದೇವಾಲಯ ಮಾಡಿದ್ದು ಇದೇ ಕಾಂಗ್ರೆಸ್. ಅಂಥವರು ನಮಗೆ ಉಪದೇಶ ಮಾಡುತ್ತಾರಾ? ಅವರಿಗೆ ತಾಕತ್ತು ಇದ್ದರೆ ಕಾಶಿ, ಮಥುರಾ ಮುಕ್ತ ಆಗಲಿ ಎಂದು ಎಐಸಿಸಿ ನಿರ್ಣಯ ಮಾಡಲಿ ನೋಡೋಣ ಎಂದು ಸವಾಲು ಎಸೆದರು.
ಪಾಕಿಸ್ತಾನ ಕಾಂಗ್ರೆಸ್ ಪಾಪದ ಕೂಸು :
ಪಾಪ ಪಾಕಿಸ್ತಾನ ಎನ್ನುವ ಖರ್ಗೆ ಅವರಿಗೆ ತಿರುಗೇಟು ನೀಡಿದ ಸಿ.ಟಿ.ರವಿ, ಪಾಕಿಸ್ತಾನ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಬ್ರಿಟಿಷ್ ಸರ್ಕಾರ, ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಲೀಗ್ ಸೇರಿಕೊಂಡು ಟ್ರೆÊ ಪಾರ್ಟಿ ಒಪ್ಪಂದ ಮಾಡಿಕೊಂಡಿದ್ದು. ಹೀಗಾಗಿಯೇ ಪಾಕಿಸ್ತಾನ ಅವರ ಪಾಪದ ಕೂಸು ಎಂದು ಪುನರ್ ಉಚ್ಛರಿಸಿದರು.
ಬಿಜೆಪಿ, ಸಂಘ ಟೀಕಿಸದಿದ್ದರೆ ಪ್ರಿಯಾಂಕ್‌ಗೆ ಅನ್ನ ಜೀರ್ಣಿಸಲ್ಲ :
ಆರ್‌ಎಸ್‌ಎಸ್ ಪಥಸಂಚನಲಕ್ಕೆ ಹಿಂದಿನಿAದಲೂ ಪರವಾನಿಗೆ ತೆಗೆದುಕೊಂಡೇ ಬರಲಾಗಿದೆ. ಅವರು(ಸಚಿವ ಪ್ರಿಯಾಂಕ್ ಖರ್ಗೆ) ದೊಡ್ಡವರ ಮಕ್ಕಳು. ನಿರಾಯಾಸವಾಗಿ ಎಲ್ಲರೂ ಬಂದಿದೆ. ಒಳ್ಳೆಯದು, ಕೆಟ್ಟದ್ದು ಎನ್ನುವ ವಿವೇಚನೆ ಅವರಿಗೆ ಬೇಕಾಗಿದೆ. ದೇಶಕ್ಕೆ ಹಾನಿ ಮಾಡುವ ಸಂಘಟನೆಗಳ ಬಗ್ಗೆ ಯಾವತ್ತೂ ಅವರು ಮಾತನಾಡಿಲ್ಲ. ದೇಶ ಭಕ್ತ ಸಂಘಟನೆ ಬಗ್ಗೆ ಮಾತ್ರ ಟೀಕೆ ಮಾಡುತ್ತಾರೆ ಎಂದರು.
ಖರ್ಗೆ ಅವರಿಂದ ನಾವೇನು ನಿದ್ದೆಗೆಟ್ಟಿಲ್ಲ. ಪ್ರಿಯಾಂಕ್ ಅವರು ನಿದ್ದೆಗೆಟ್ಟಿದ್ದಾರೆ. ನಿತ್ಯ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡದೇ ಇದ್ದರೆ ಅವರಿಗೆ ತಿಂದ ಅನ್ನ ಜೀರ್ಣ ಆಗಲ್ಲ ಎಂದು ಚುಚ್ಚಿದರು.
ಸಂಸದರಾದ ಗೋವಿಂದ ಕಾರಜೋಳ, ನಾರಾಯಣಸಾ ಭಾಂಡಗೆ, ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ಶಾಸಕ ರಾಜಶೇಖರ ಶೀಲವಂತ ಇದ್ದರು.