ಗುಳೇದಗುಡ್ಡದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಲಕರ, ಪೋಷಕರ ಶಿಕ್ಷಕರ ಸಭೆ ಎಸ್‌ಡಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಉದ್ಘಾಟಿಸಿದರು. ನ್ಯಾಯವಾದಿ ಪುಂಡಲೀಕ ಬಡಿಗೇರ, ಉಪಪ್ರಾಚಾರ್ಯ ಮಲ್ಲಿಕಾರ್ಜುನ ಮಾಗಿ, ಸುಜಾತಾ ರಾಠೋಡ, ಪ್ರೇಮಾ ಸಂಕನೂರ, ಶಿಕ್ಷಕರಾದ ಸಂಗಮೇಶ ಕಡಿ, ಸಿ.ಎಂ ಕುರುಬರ, ರಮೇಶ ಬಳ್ಳಾ. ನಿರ್ಮಲಾ ಕುಚನೂರ ಇದ್ದರು.
- ನ್ಯಾಯವಾದಿ ಪುಂಡಲೀಕ ಬಡಿಗೇರ ಅಭಿಮತ
- ಪಾಲಕರ, ಪೋಷಕರ ಮಹಾಸಭೆ
- ಶಿಕ್ಷಕರು ಮಕ್ಕಳಿಗೆ ನೀಡುವ ಶಿಕ್ಷೆಯನ್ನು ನೋವು ಎಂದು ತಿಳಿದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ
ಗುಳೇದಗುಡ್ಡ: ಪ್ರತಿಯೊಬ್ಬ ವ್ಯಕ್ತಿಯ ಮೂಲ ಹಕ್ಕು, ಕರ್ತವ್ಯ, ವ್ಯಕ್ತಿಗತ ಸ್ವಾತಂತ್ರ್ಯಗಳನ್ನು ಒಳಗೊಂಡ ಸುದೀರ್ಘವಾದ ಸಂವಿಧಾನ ನಮ್ಮದಾಗಿದ್ದು, ವಿದ್ಯಾರ್ಥಿಗಳಿಗೆ ಅದರ ಅರಿವು ಇರಬೇಕು ಎಂದು ನ್ಯಾಯವಾದಿ ಪುಂಡಲೀಕ ಬಡಿಗೇರ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಪೋಷಕರ, ಶಿಕ್ಷಕರ ಮಹಾ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ನೀಡುವ ಶಿಕ್ಷೆಯನ್ನು ನೋವು ಎಂದು ತಿಳಿದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಕಲ್ಲು ಉಳಿ, ಸುತ್ತಿಗೆ ಪೆಟ್ಟು ಸಹಿಸದಿದ್ದರೆ ಗುಡಿಯಲ್ಲಿನ ಮೂರ್ತಿ ಆಗಲು ಸಾಧ್ಯವಿಲ್ಲ. ಹಾಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಗುರುಕುಲದಲ್ಲಿ ನೀಡುವ ಶಿಕ್ಷಣದಲ್ಲಿ ಕಾಕಚೇಷ್ಠೆ, ವಿದ್ಯಾಭ್ಯಾಸ, ಶ್ವಾನ ನಿದ್ರೆ, ಮಿತ ಆಹಾರ ಈ ಐದು ಪಂಚ ಸೂತ್ರಗಳನ್ನು ಬೋಧಿಸುತ್ತಿದ್ದರು. ಈ ಐದು ಪಂಚಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಇಂದಿಗೂ ಅವಶ್ಯವಾಗಿದ್ದು, ಇವುಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಮಲ್ಲಿಕಾರ್ಜುನ ಮಾಗಿ ಮಾತನಾಡಿ, ಪ್ರತಿನಿತ್ಯವೂ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬಂದಾಗ ಮಾತ್ರವೇ ಮಕ್ಕಳಿಗೆ ಸಮಗ್ರ ನೀಡಲು ಸಾಧ್ಯ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ತಂದೆ, ತಾಯಿಗಳು ಮಕ್ಕಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸ ಹೊಂದಿ ಪಾಲಕರ ಕನಸನ್ನು ನನಸು ಮಾಡಬೇಕು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಉದ್ಘಾಟಿಸಿದರು. ಎಸ್‌ಡಿಎಂಸಿ ಸದಸ್ಯರಾದ ಸುಜಾತಾ ರಾಠೋಡ, ಪ್ರೇಮಾ ಸಂಕನೂರ, ಶಿಕ್ಷಕರಾದ ಸಂಗಮೇಶ ಕಡಿ, ಸಿ.ಎಂ. ಕುರುಬರ, ರಮೇಶ ಬಳ್ಳಾ. ನಿರ್ಮಲಾ ಕುಚನೂರ. ಸವಿತಾ ದೇವಗಿರಕರ, ಸುವರ್ಣ ಬಿರಾದಾರ, ಎಲ್.ಐ. ಅಂಗಡಿ, ದೇವರಾಜ ಅಡ್ಡಿ, ಬಸವರಾಜ ಪಾಟೀಲ ಇತರರು ಇದ್ದರು.