ಬಾಗಲಕೋಟೆ ನಗರದ ಚರಂತಿಮಠದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷ ಡಾ. ಭೀಮಣ್ಣ ಖಂಡ್ರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚರಂತಿಮಠದ ಪ್ರಭು ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಕಾರಂಜಿಮಠದ ಶಿವಯೋಗಿ ದೇವರು, ಟೀಕಿನಮಠದ ಮಲ್ಲಿಕಾರ್ಜುನ ದೇವರು, ಚಂದ್ರಶೇಖರ ಶೆಟ್ಟರ, ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ ಇದ್ದರು.
- ಲಿಂ. ಭೀಮಣ್ಣ ಖಂಡ್ರೆ ಅಗಲಿಕೆ ತುಂಬಲಾರದ ನಷ್ಟ
- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ
- ಹೈದ್ರಾಬಾದ ಕರ್ನಾಟಕದ ಅಭಿವೃದ್ಧಿಗಾಗಿ ಡಾ.ಭೀಮಣ್ಣ ಖಂಡ್ರೆಯವರು ಸಲ್ಲಿಸಿದ ಸೇವೆ ಅವಿಸ್ಮರಣೀಯ
ಬಾಗಲಕೋಟೆ : ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷ ಡಾ.ಭೀಮಣ್ಣ ಖಂಡ್ರೆ ಅವರಿಗೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಶನಿವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಸಮಾಜ ಜೀವಿಯಾಗಿ ಯಾವಾಗಲೂ ಸಮಾಜದ ಹಿತ ಚಿಂತನೆ ಬಯಸಿದ ಧೀಮಂತ ನಾಯಕ ಡಾ.ಭೀಮಣ್ಣ ಖಂಡ್ರೆ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಅಪ್ರತಿಮ ಹೋರಾಟಗಾರರಾಗಿದ್ದ ಡಾ.ಖಂಡ್ರೆಯವರು ಸಮಾಜಕ್ಕೆ ತೊಂದರೆ ಉಂಟಾದಾಗಲೆಲ್ಲ ಪ್ರತಿಭಟನೆ ಮಾಡುತ್ತಿದ್ದರು ಎಂದರು.
ಮಹಾಸಭಾದ ಜಿಲ್ಲಾ ಗೌರವ ಅಧ್ಯಕ್ಷ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಹೈದ್ರಾಬಾದ ಕರ್ನಾಟಕದ ಅಭಿವೃದ್ಧಿಗಾಗಿ ಡಾ.ಭೀಮಣ್ಣ ಖಂಡ್ರೆಯವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ನಿಜಾಮ ಆಡಳಿತದಲ್ಲಿ ದಯಾನಂದ ಸರಸ್ವತಿ ಅವರು ಆ ಭಾಗದಲ್ಲಿ ಅರಸೊತ್ತಿಗೆಯ ದಬ್ಬಾಳಿಕೆಯ ವಿರುದ್ಧ ಕೈಕೊಂಡ ಜಾಗೃತಿಯ ಕಾರ್ಯದಲ್ಲಿ ತರಬೇತಿ ಪಡೆದ ಖಂಡ್ರೆ ಹೋರಾಟ ಗುಣ ಅಳವಡಿಸಿಕೊಂಡಿದ್ದರು. ಸ್ವಾತಂತ್ರೃ ಹೋರಾಟ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಅದಕ್ಕೊಂದು ನೆಲೆಕಲ್ಪಿಸಿಕೊಟ್ಟರು. ಅನುಭವ ಮಂಟಪದ ನಿರ್ಮಾಣಕ್ಕಾಗಿ ಬಿ.ಡಿ.ಜತ್ತಿ ಕೈಗೊಂಡಿದ್ದ ಪಾದಯಾತ್ರೆಗೆ ಭೀಮಣ್ಣ ಖಂಡ್ರೆ ಪಾತ್ರ ಪ್ರಮುಖವಾಗಿತ್ತು ಎಂದು ತಿಳಿಸಿದರು.
ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಕಾರಂಜಿಮಠದ ಶಿವಯೋಗಿ ದೇವರು, ಟೀಕಿನಮಠದ ಮಲ್ಲಿಕಾರ್ಜುನ ದೇವರು, ಚಂದ್ರಶೇಖರ ಶೆಟ್ಟರ, ಪ್ರಭುಸ್ವಾಮಿ ಗಣಾಚಾರಿ, ಗುರುಬಸವ ಸೂಳಿಭಾವಿ, ಎ.ಎಸ್.ಪಾವಟೆ ಇತರರು ಇದ್ದರು. ಬಸವರಾಜ ಮುಕ್ಕುಪ್ಪಿ ಶರಣು ಸಮರ್ಪಿಸಿದರು.