ಮುಧೋಳದ ಸಿದ್ಧೇಶ್ವರ ಬ್ಯಾರೇಜ್ ಹತ್ತಿರ ನೀರಿನ ಕೊರತೆಯಿಂದ ನದಿ ಪಾತ್ರದಲ್ಲಿ ಕಲ್ಲುಗಳು ಮತ್ತು ಒಣಗಿದ ನೆಲ ಕಾಣಿಸುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ನಿಂತಿರುವ ಕಲುಷಿತ ನೀರು ಕೂಡ ಬಿಸಿಲಿನ ತಾಪಕ್ಕೆ ಆವಿಯಾಗುತ್ತಿದೆ.
- ನದಿ ತೀರದ ಗ್ರಾಮಗಳಲ್ಲಿ ಜಲ ಸಂಕಷ್ಟ
- ನೀರಿನ ಹರಿವು ಸ್ಥಗಿತ
- ಮುನ್ನೆಚ್ಚರಿಕೆಗೆ ರೈತರ ಒತ್ತಾಯ
ಡಾ. ವೆಂಕಟೇಶ ಗುಡೆಪ್ಪನವರ ಮುಧೋಳ: ತಾಲೂಕಿನ ಜೀವನದಿ ಘಟಪ್ರಭೆಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತು ಹೋಗಿದೆ. ಇದರಿಂದಾಗಿ ನದಿ ಪಾತ್ರದ ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪ್ರತಿ ವರ್ಷ ನಿರಂತರವಾಗಿ ಹರಿಯುತ್ತಿದ್ದ ನದಿಯಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ.
ಪ್ರಸ್ತುತ ಮಿರ್ಜಿ, ಚನ್ನಾಳ, ಜಾಲಿಬೇರ, ಮುಧೋಳ, ಜೀರಗಾಳ, ಚಿಚಖಂಡಿ, ಜಂಬಗಿ ಕೆ.ಡಿ., ಕಸಬಾಜಂಬಗಿ, ಇಂಗಳಗಿ, ಮಾಚಕನೂರು, ತಿಮ್ಮಾಪೂರ, ಆಲಗುಂಡಿ ಬಿ.ಕೆ ಸೇರಿ ಒಟ್ಟು ಹನ್ನೆರಡು ಬ್ಯಾರೇಜ್‌ನಲ್ಲಿ ಮಿರ್ಜಿ, ಚನ್ನಾಳ ಹಾಗೂ ಮುಧೋಳದ ಹತ್ತಿರ ಸ್ವಲ್ಪ ನೀರು ಮಾತ್ರ ಇದ್ದು ಉಳಿದ ಬ್ಯಾರೇಜ್‌ಗಳು ಬತ್ತಿ ಹೋಗಿವೆ.
ನದಿಯ ತಗ್ಗು ಪ್ರದೇಶಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಸಂಗ್ರಹವಿದ್ದು, ಬಿಸಿಲಿನ ತಾಪಕ್ಕೆ ಅದೂ ಕೂಡ ಬಾಷ್ಪೀಕರಣಗೊಳ್ಳುತ್ತಿದೆ.
ಇದರಿಂದಾಗಿ ನದಿಯನ್ನೇ ಅವಲಂಬಿಸಿರುವ ಕೃಷಿ ಕುಟುಂಬಗಳು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಮಳೆ ಕೊರತೆ ಹಾಗೂ ಹವಾಮಾನ ವೈಪರಿತ್ಯದ ನಡುವೆ ಸಂಬಂಧಪಟ್ಟ ಅಽಕಾರಿಗಳು ನದಿ ಪಾತ್ರದಲ್ಲಿ ನೀರು ಸಂಗ್ರಹಿಸಲು ಮತ್ತು ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.
ಮೇಲ್ಭಾಗದ ಜಲಾಶಯಗಳಿಂದ ತಕ್ಷಣ ನೀರು ಬಿಡುಗಡೆ ಮಾಡದಿದ್ದಲ್ಲಿ ಗ್ರಾಮೀಣ ಭಾಗದ ಜನ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ನೀರು
ಬೇಸಿಗೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜನ- ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಿರಿಯ ಅಧಿಕಾರಿಗಳು ಮಹತ್ವದ ಕ್ರಮ ಕೈಗೊಂಡಿದ್ದು, ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿ ಮೂಲಕ ಬಾಗಲಕೋಟೆ ಜಿಲ್ಲೆಯ ನದಿ ಅವಲಂಬಿತ ಗ್ರಾಮಗಳಿಗೆ ಹಾಗೂ ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆಗೆ ಒಟ್ಟು 1.60 ಟಿಎಂಸಿ ನೀರನ್ನು ಮೇ 18ರಿಂದ ಬನ್ನಿದಿನ್ನಿ ಬ್ಯಾರೇಜ್‌ವರೆಗೆ ಹರಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಿಡುಗಡೆಯಾಗುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದ್ದು, ನದಿ ಪಾತ್ರದಲ್ಲಿ ರೈತರು ಅಳವಡಿಸಿರುವ ವಿದ್ಯುತ್ ಪಂಪ್‌ಸೆಟ್‌ಗಳ ಸಂಪರ್ಕ ಕಡ್ಡಾಯವಾಗಿ ಕಡಿತಗೊಳಿಸಲು ಹೆಸ್ಕಾಂಗೆ ಸೂಚಿಸಲಾಗಿದೆ. ನೀರು ಪೋಲಾಗದಂತೆ ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಕಂದಾಯ, ಪೊಲೀಸ್ ಹಾಗೂ ನೀರಾವರಿ ಇಲಾಖೆಯ ಜಂಟಿ ಕಾರ್ಯಪಡೆ ರಚಿಸಿ 24 ಗಂಟೆಯೂ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದ್ದು, ಸಚಿವರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ಯಶಸ್ವಿಯಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.
"
ಘಟಪ್ರಭಾ ನದಿ ಬತ್ತುತ್ತಿರುವ ಕುರಿತು ಈಗಾಗಲೇ ನಮಗೆ ವರದಿಗಳು ಬಂದಿವೆ. ನದಿ ತೀರದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ನಾವು ಗಮನಿಸಿದ್ದೇವೆ. ಈ ಕುರಿತು ವರದಿ ಪಡೆದಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
— | ಶ್ವೇತಾ ಬೀಡಿಕರ, ಎಸಿ, ಜಮಖಂಡಿ
"
ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ, ಸದ್ಯ ತಗ್ಗು ಪ್ರದೇಶಗಳಲ್ಲಿ ಕಾಣಿಸುತ್ತಿರುವ ಅಲ್ಪ ನೀರು ಇನ್ನಷ್ಟು ದಿನಗಳ ಕಾಲ ಬರುವುದೂ ಕಷ್ಟವಿದೆ. ಅಧಿಕಾರಿಗಳು ಕೈಗಾರಿಕೆಗಳಿಗೆ ಹೋಗುವ ನೀರನ್ನು ಸರಿಯಾಗಿ ಬಂದ್ ಮಾಡುತ್ತಿಲ್ಲ. ಕೂಡಲೇ ಮಹಾರಾಷ್ಟ್ರ ಸರ್ಕಾರ ಅಥವಾ ಮೇಲ್ಭಾಗದ ಜಲಾಶಯದ ಅಧಿಕಾರಿಗಳೊಂದಿಗೆ ಮಾತನಾಡಿ ನೀರು ಬಿಡಿಸದಿದ್ದರೆ. ನಮ್ಮ ಜನ-ಜಾನುವಾರುಗಳು ಬದುಕುವುದು ಅಸಾಧ್ಯ. ನಾವು ಸಂಬಂಧಪಟ್ಟ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ.
— | ದುಂಡಪ್ಪ ಯರಗಟ್ಟಿ, ರೈತ ಮುಖಂಡರು