ಕೂಡಲ ಸಂಗಮದ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಸಂಗಪ್ಪ ಚೌಧರಿ ಮಾತನಾಡಿದರು.
- ನಿವೃತ್ತ ಶಿಕ್ಷಕ ಸಂಗಪ್ಪ ಚೌಧರಿ ಅಭಿಮತ
- ಗುರುವಂದನಾ ಕಾರ್ಯಕ್ರಮ
- 26 ವರ್ಷಗಳ ನಂತರ ನಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಒಂದುಗೂಡಿ ಗುರುಗಳನ್ನು ಸ್ಮರಣೆ ಮಾಡಿರುವುದು ಹೆಮ್ಮೆಯ ಸಂಗತಿ
ಕೂಡಲಸಂಗಮ : ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಿಗೆ ಸಾರ್ಥಕಭಾವ ಮೂಡಲಿದೆ ಎಂದು ನಿವೃತ್ತ ಶಿಕ್ಷಕ ಸಂಗಪ್ಪ ಚೌಧರಿ ಹೇಳಿದರು.
ಕೂಡಲ ಸಂಗಮದ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ಭಾನುವಾರ 2001-02ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುಗಳಿಂದ ಶಿಷ್ಯರು ಗುರುತಿಸಿಕೊಳ್ಳಬಾರದು, ಶಿಷ್ಯರಿಂದ ಗುರುಗಳು ಗುರುತಿಸಿಕೊಳ್ಳುವ ಹಾಗೆ ಸಾಧನೆ ಮಾಡಬೇಕು. ಉತ್ತಮ ಸಂಸ್ಕಾರದೊಂದಿಗೆ ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕು ಎಂದರು.
ನಿವೃತ್ತ ಶಿಕ್ಷಕ ಎಚ್.ಎಸ್. ಮುತ್ತಗಿ ಮಾತನಾಡಿ, 26 ವರ್ಷಗಳ ನಂತರ ನಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಒಂದುಗೂಡಿ ಗುರುಗಳನ್ನು ಸ್ಮರಣೆ ಮಾಡಿರುವುದು ಹೆಮ್ಮೆಯ ಸಂಗತಿ. 26 ವರ್ಷದಲ್ಲಿ ಅನೇಕ ಬದಲಾವಣೆಗಳು ವಿದ್ಯಾರ್ಥಿಗಳಲ್ಲಿ ಆಗಿದೆ, ಆದರ್ಶಯುತವಾಗಿ ಸಮಾಜಕ್ಕೆ ಮಾದರಿಯಾಗುವಂತೆ ಬದುಕುತ್ತಿರುವ ವಿದ್ಯಾರ್ಥಿಗಳ ಸಾಧನೆ ಸಂತೋಷ ಉಂಟುಮಾಡಿದೆ ಎಂದು ತಿಳಿಸಿದರು.
ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಿ.ಆರ್. ಚೌಗಲೆ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗುರುಗಳನ್ನು ಗುರುತಿಸುವ, ಗೌರವಿಸುವ ಶಿಷ್ಯರು ಇರುವುದು ಹೆಮ್ಮೆಯ ಸಂಗತಿ, ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.
ಸಂಗಮೇಶ್ವರ ಪ್ರೌಢ ಶಾಲೆ ಮುಖ್ಯಗುರು ಎ.ವೈ. ಕೊಪ್ಪದ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಐ.ಎಸ್. ಬಡ್ಡಿ, ಬಸವರಾಜ ಸಂಕನೂರ, ಸಿದ್ದಪ್ಪ ಮುತ್ತಲಗೇರಿ, ಶಂಕರಪ್ಪ ಯಡಹಳ್ಳಿ, ಪ್ರಕಾಶ ಶಿವನಗುತ್ತಿ, ಸಂಗಮೇಶ ಹಂಡಿ, ಬಸವರಾಜ ದೇಸಾಯಿ, ಮಲ್ಲಿಕಾರ್ಜುನ ಅಂಗಡಿ ಇದ್ದರು. 150ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.