ಮಹಾಲಿಂಗಪುರದ ಆರ್ಯವೈಶ್ಯ ಸಮಾಜದವರಿಂದ ಜರುಗಿದ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಂಗಲ್ಯ ಧಾರಣೆಗೆ ಮುನ್ನ ಗಣೇಶ ಪೂಜೆ ಸಲ್ಲಿಸಲಾಯಿತು. ಅಧ್ಯಕ್ಷ ರಾಘವೇಂದ್ರಪ್ರಸಾದ ಗುಂಡಾ, ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಗುಂಡಾ, ವೆಂಕಟೇಶ ಗುಂಡಾ ಇತರರಿದ್ದರು.
- ಶಾಸಕ ಸಿದ್ದು ಸವದಿ ಅನಿಸಿಕೆ
- ಅಧಿಕಮಾಸ ನಿಮಿತ್ತ ಗಿರಿಜಾ ಕಲ್ಯಾಣೋತ್ಸವ ಆಯೋಜನೆ
- ಆರ್ಯವೈಶ್ಯ ಸಮಾಜದವರು ಕೊಡುಗೈ ದಾನಿಗಳು, ದೈವ ಭಕ್ತಿ ಉಳ್ಳವರು
ಮಹಾಲಿಂಗಪುರ: ಆರ್ಯವೈಶ್ಯ ಸಮಾಜದವರು ಕೊಡುಗೈ ದಾನಿಗಳು, ದೈವ ಭಕ್ತಿ ಉಳ್ಳವರು. ರಾಜ್ಯದಲ್ಲಿ ಈ ಸಮಾಜದವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಗರದಲ್ಲಿ ಗಿರಿಜಾ ಕಲ್ಯಾಣೋತ್ಸವ ಹಮ್ಮಿಕೊಂಡು ಧರ್ಮ ಜಾಗೃತಿ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ವಾಸವಿ ನಗರದ ವಾಸವಿ ಮಂದಿರದಲ್ಲಿ ಆರ್ಯ ವೈಶ್ಯ ಸಮಾಜದ ವತಿಯಿಂದ ಬುಧವಾರ ಆಯೋಜಿಸಿದ್ದ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಯ ವೈಶ್ಯರ ಸಂಸ್ಕೃತಿ ಅತ್ಯಂತ ವಿಶೇಷವಾಗಿದ್ದು, ತಮ್ಮ ಗಳಿಕೆಯಲ್ಲಿ ಸ್ವಲ್ಪ ಭಾಗ ಸೇವೆಗೆ ಮುಡುಪಾಗಿಡುತ್ತಾರೆ ಎಂದರು.
ಹುಬ್ಬಳ್ಳಿಯ ರಾಘವೇಂದ್ರ ಆಚಾರ್ಯ ಹೊಸಳ್ಳಿ ಮಾತನಾಡಿ, ಅಧಿಕ ಮಾಸದಲ್ಲಿ ಶ್ರೀನಿವಾಸ ಕಲ್ಯಾಣ, ಸೀತಾರಾಮ ಕಲ್ಯಾಣ, ಗಿರಿಜಾ ಕಲ್ಯಾಣ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಂತಹ ಪುಣ್ಯ ಬರುತ್ತದೆ. ದಾನ ಮಾಡುವುದರಿಂದ ಅಧಿಕ ಪುಣ್ಯ ಮರಳಿ ಬರುತ್ತದೆ. ಗಿರಿಜಾ ಕಲ್ಯಾಣ ಮಾಡುವುದರಿಂದ ಆರೋಗ್ಯ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಸಂಜೆ 6-30ಕ್ಕೆ ಗೋಧೂಳಿ ಮುಹೂರ್ತದಲ್ಲಿ ಗಿರಿಜಾ ಕಲ್ಯಾಣ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ 9 ಗಂಟೆಗೆ ಮಾಂಗಲ್ಯಧಾರಣೆ ಮಾಡಲಾಯಿತು. ಕಲ್ಯಾಣ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗಿದವು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಪ್ರಸಾದ ಗುಂಡಾ, ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಗುಂಡಾ, ವೆಂಕಟೇಶ ಗುಂಡಾ, ನಾರಾಯಣ ಗುಂಡಾ, ಶ್ರೀಪಾದ ಗುಂಡಾ, ಶ್ರೀನಿವಾಸ ಗುಂಡಾ, ಬಾಬು ಗುಂಡಾ, ಮಂಜುನಾಥ ಗುಂಡಾ,ಆನಂದ ಗುಂಡಾ, ಡಾ. ವಿಶ್ವನಾಥ ಗುಂಡಾ, ಸುಧೀರ ಗುಂಡಾ, ಸುಮಂಗಲಾ ಗುಂಡಾ, ಸುಕನ್ಯಾ ಗುಂಡಾ ಸೇರಿ ವಿವಿಧ ಸಮಾಜಗಳ ನೂರಾರು ಜನರು ಭಾಗಿಯಾಗಿದ್ದರು.