ಮಹಾಲಿಂಗಪುರದ ದಾನಮ್ಮದೇವಿ ನಗರದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಶಿಕ್ಷಕ ದಂಪತಿ ವೈ.ವೈ. ತಂಬೂರಿ ಮತ್ತು ಎಸ್.ಎಚ್. ಮೆಳವಂಕಿ ಅವರನ್ನು ಸರೋಜಾ ಶಿರೋಳ ಅವರು ಬಸವಣ್ಣನವರ ಭಾವಚಿತ್ರ ನೀಡಿ ಸನ್ಮಾನಿಸಿದರು. ಶರಣ ಬಸವರಾಜ ಹಡಪದ ಉಪಸ್ಥಿತರಿದ್ದರು. 
ಬಾಗಲಕೋಟೆ

ಶರಣರ ಸಂಗವೇ ನಿಜವಾದ ಸತ್ಸಂಗ

ಪ್ರಮುಖ ಮುಖ್ಯಾಂಶಗಳು

  • ಉಮೇಶ ಸಿದ್ನಾಳ ಅಭಿಮತ
  • ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
  • ಕಾಯಕದ ಆಧಾರದ ಮೇಲೆ ಸರ್ವಸಮಾನತೆಯನ್ನು ಸ್ಥಾಪಿಸಿದ ಶರಣರ ಬದುಕು ತತ್ವಸಿದ್ಧಾಂತದ ಬದುಕಾಗಿತ್ತು.
ಮಹಾಲಿಂಗಪುರ:

ಸಾಮಾಜಿಕ ಸಮಾನತೆಗಾಗಿ ಹೋರಾಡಿದ 12ನೇ ಶತಮಾನದ ಶರಣ ವಿಶ್ವಗುರು ಬಸವಣ್ಣನವರು ’’ಸರ್ವ ಜನಾಂಗಕ್ಕೆ ಲೇಸನ್ನೇ ಬಯಸುವ ಸಂದೇಶದ ಮೂಲಕ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದರು ಎಂದು ಕರ್ನಾಟಕ ಆದಿಜಾಂಬವ ಅಭಿವದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಉಮೇಶ ಸಿದ್ನಾಳ ಹೇಳಿದರು.


ಪಟ್ಟಣದ ಶ್ರೀ ದಾನಮ್ಮದೇವಿ ನಗರದ ಶಿಕ್ಷಕ ದಂಪತಿ ವೈ.ವೈ. ತಂಬೂರಿ ಹಾಗೂ ಎಸ್.ಎಚ್. ಮೆಳವಂಕಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಕದ ಆಧಾರದ ಮೇಲೆ ಸರ್ವಸಮಾನತೆಯನ್ನು ಸ್ಥಾಪಿಸಿದ ಶರಣರ ಬದುಕು ತತ್ವಸಿದ್ಧಾಂತದ ಬದುಕಾಗಿತ್ತು. ಶರಣರ ಸಂಗವೇ ನಿಜವಾದ ಸತ್ಸಂಗ ಎಂದು ಅವರು ಹೇಳಿದರು.
ಸಾಹಿತಿ ಹಾಗೂ ಶಿಕ್ಷಕಿ ದಾಕ್ಷಾಯಣಿ ಮಂಡಿ ಮತ್ತು ಅಕ್ಕೂತಾಯಿ ಕಿಚಡಿ ಮಾತನಾಡಿ, ನುಡಿದಂತೆ ನಡೆದ, ನಡೆದಂತೆ ನುಡಿದ 12ನೇ ಶತಮಾನದ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಒತ್ತಡದ ಬದುಕಿನಲ್ಲಿ ಸತ್ಸಂಗದಲ್ಲಿ ಭಾಗವಹಿಸುತ್ತಿರುವುದೇ ಅದಕ್ಕೆ ಸಾಕ್ಷಿಯಾಗಿದೆ ಎಂದರು.
ಸುಮಾರು 900 ವರ್ಷಗಳಿಂದ ಮಾನವಕುಲಕ್ಕೆ ದಾರಿದೀಪವಾಗಿರುವ ಶರಣರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಅಗತ್ಯವಾಗಿದೆ. ಶರಣರ ಸಾಹಿತ್ಯವು ಲಿಂಗ ಅಸಮಾನತೆ, ಪಾಂಡಿತ್ಯದ ಅಸಮಾನತೆ ಹಾಗೂ ವರ್ಗಭೇದವನ್ನು ತೊಲಗಿಸುವ ಉದ್ದೇಶ ಹೊಂದಿತ್ತು ಎಂದು ಅವರು ಹೇಳಿದರು.
ಅಂದು ಸ್ಥಾಪನೆಯಾದ ಅನುಭವ ಮಂಟಪವು ವಿಶ್ವದ ಮೊದಲ ಸಂಸತ್ತಾಗಿದ್ದು, ವಿಶ್ವದ ವಿವಿಧ ಭಾಗಗಳಿಂದ ಶರಣರು ಆಗಮಿಸಿ ಸತ್ಸಂಗದಲ್ಲಿ ಪಾಲ್ಗೊಳ್ಳುತ್ತಿದ್ದರು. ಮಹಾಲಿಂಗಪುರದ ’ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮವು ಅನುಭವ ಮಂಟಪದ ಪರಿಕಲ್ಪನೆಯನ್ನು ನೆನಪಿಸುವಂತಿದೆ. ನಗೆಮಾರಿ ಮಾರಯ್ಯ ಶಿವ-ಪಾರ್ವತಿಯರನ್ನೇ ನಗಿಸಿದ ಶರಣರಾಗಿದ್ದು, ಶರಣರು ಭೂಮಿಯನ್ನೇ ಕೈಲಾಸವನ್ನಾಗಿ ಪರಿವರ್ತಿಸಿದ್ದರು ಎಂದರು.
ಶ್ರೀಶೈಲಪ್ಪ ಉಳ್ಳಾಗಡ್ಡಿ, ಸಿ.ಎಂ. ಕಟಗಿ, ಹುಮಾಯೂನ ಸುತಾರ, ಬಸವರಾಜ ಮೇಟಿ, ಎನ್.ಬಿ. ಪಾಟೀಲ, ಸಪ್ನಾ ಅನಿಗೋಳ, ಬಸವರಾಜ ಹಡಪದ, ಎಸ್.ಎನ್. ಬ್ಯಾಳಿ, ಸರೋಜಾ ಶಿರೋಳ, ಎಸ್.ಎಚ್. ಮೆಳವಂಕಿ, ವೈ.ವೈ. ತಂಬೂರಿ, ಶಿವಲಿಂಗ ಸಿದ್ನಾಳ, ಆರ್.ಎಸ್. ರೋಣದ ಸೇರಿ ಹಲವರು ಉಪಸ್ಥಿತರಿದ್ದರು.