ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮತ್ತಿತರರಿದ್ದರು.
- ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಆರೋಪ
- ದೇಶದ್ಯಂತ ನರೇಗಾ ವಿಚಾರದಲ್ಲಿ ಜನಜಾಗೃತಿ
- ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ
ಬಾಗಲಕೋಟೆ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ದೇಶದ ಬಡವರ ಹಕ್ಕು ಹತ್ತಿಕ್ಕುವ ಹುನ್ನಾರ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಳ್ಳಿಯಿಂದ ದಿಲ್ಲಿ ಆಡಳಿತ ಎನ್ನುವುದನ್ನು ದಿಲ್ಲಿಯಿಂದ ಆಡಳಿತ ಮಾಡಲು ಹೊರಟಿದ್ದಾರೆ. ಯೋಜನೆಯಲ್ಲಿ ಬದಲಾವಣೆ ಮಾಡುವ ಮೂಲಕ ಗ್ರಾಮ ಪಂಚಾಯಿತಿಗಿದ್ದ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಉದ್ಯೋಗ ಖಾತ್ರಿ ಮೂಲಕ ತಮ್ಮ ಗ್ರಾಮಕ್ಕೆ ಬೇಕಾದ ಕೆಲಸವನ್ನು ಗ್ರಾಮದವರೇ ನಿರ್ಧಾರ ಮಾಡಿಕೊಳ್ಳುತ್ತಿದ್ದರು. ಈಗ ಅಧಿಕಾರವನ್ನು ಸಂಸತ್ತಿಗೆ ವರ್ಗಾಯಿಸಲಾಗಿದೆ. ನರೇಂದ್ರ ಮೋದಿ ಸರ್ಕಾರ ಪಂಚಾಯಿತಿ ಆಡಳಿತವನ್ನು ಸಹ ಅದಾನಿ, ಅಂಬಾನಿ ಸೇರಿದಂತೆ ಕಾರ್ಪೋರೇಟ್‌ಗೆ ವಹಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು ದೆಹಲಿಯಿಂದ ಆಡಳಿತ ಆಗಬಾರದು ಎಂದು ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಿದ್ದರು. ಮುಂದುವರಿದು ಮನಮೋಹನಸಿಂಗ್ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು, ಅದಕ್ಕೆ ಮಹಾತ್ಮಾ ಗಾಂಧಿ ಹೆಸರು ಇಟ್ಟಿದ್ದರು. ಆದರೆ, ಮೋದಿ ಸರ್ಕಾರ ಗಾಂಧಿ ಹೆಸರು ತೆಗೆದು ಜಿ ರಾಮ್ ಜಿ ಹೆಸರು ಇಟ್ಟಿದೆ. ಕೇಂದ್ರ ಸರ್ಕಾರವೇ ನೀಡುತ್ತಿದ್ದ ಅನುದಾನ ಕಡಿತಮಾಡಿ ಈಗ ಕೇಂದ್ರದ್ದು ಶೇ. 60, ರಾಜ್ಯದ್ದು ಶೇ. 40 ಅನುದಾನ ಎಂದು ಬದಲಾಯಿಸಲಾಗಿದೆ. ಆ ಮೂಲಕ ಅನುದಾನ ಕಡಿತ ಮಾಡಲಾಗುತ್ತಿದೆ. ರಾಜ್ಯದ ತೆರಿಗೆಯಲ್ಲಿಯೂ ಕಡಿಮೆ ಪಾಲು ನೀಡಲಾಗುತ್ತಿದೆ. ಈ ಮೂಲಕ ಬಡ ಜನರ ಉದ್ಯೋಗ ಕಿತ್ತಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿಯೂ ಬರೀ ಧರ್ಮ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದಿದೆ. ಧರ್ಮ ಧರ್ಮ ಎನ್ನುವ ಬಿಜೆಪಿ ಅಧರ್ಮದಿಂದ ನಡೆಯುತ್ತಿದೆ. ಇನ್ನು ಮೋದಿ ಅವರು ನಿತ್ಯ ದೇವಸ್ಥಾನಕ್ಕೆ ಹೋಗಿ ಕೈಮುಗಿದು ನಿಂತಿರುವ ದೃಶ್ಯಗಳೇ ಕಾಣುತ್ತಿವೆ. ಜನರಿಗೆ ಮೋಸ ಮಾಡಿ ದೇವರಿಗೆ ಕೈ ಮುಗಿದರೆ, ಆ ದೇವರು ಇವರನ್ನು ಕ್ಷಮಿಸಲ್ಲ ಎಂದು ತಿವಿದರು.
ನರೇಗಾ ಯೋಜನೆ ಬದಲಾವಣೆ ವಿರೋಧಿಸಿ ಇಡೀ ದೇಶದ್ಯಂತ ಜನ ಜಾಗೃತಿ ಮೂಡಿಸುವ ಕೇಂದ್ರ ಸರ್ಕಾರದ ಹುನ್ನಾರ ಬಯಲಿಗೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ. ರಾಜ್ಯದಲ್ಲೂ ಸಹ ಕೆಪಿಸಿಸಿಯಿಂದ ಹೋರಾಟದ ರೂಪರೇಷೆಗಳು ನಡೆದಿವೆ ಎಂದರು.
ರಾಮನ ಹೆಸರನ್ನು ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಸ್ವಾತಂತ್ರ್ಯವನ್ನೂ ಹತ್ತಿಕ್ಕಲಾಗುತ್ತಿದೆ. ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಗಾಂಧೀಜಿ ಹಾಗೂ ಮೋದಿ ಅವರು ಗುಜರಾತ್‌ಗೆ ಸೇರಿದವರಾಗಿರುವುದರಿಂದ ಮಹಾತ್ಮಗಾಂಧಿ ಅವರ ಹೆಸರನ್ನು ಅಳಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಯೋಜನೆಗಳಿಗೆ ನಾಥುರಾಮ್ ಗೋಡ್ಸೆ ಹೆಸರಿಟ್ಟಿರೂ ಆಶ್ಚರ್ಯವಿಲ್ಲ ಎಂದು ಟೀಕಿಸಿದರು.
ಶ್ರೀರಾಮ ಬಹಳ ದೊಡ್ಡವನು. ಆದರೆ, ಎಲ್ಲದಕ್ಕೂ ರಾಮನ ಹೆಸರು ಎಳೆದು ತರುವ ಮೂಲಕ ಸಣ್ಣವನನ್ನಾಗಿ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಫೀರಪ್ಪ ಮ್ಯಾಗೇರಿ, ಶ್ರೀನಿವಾರ ಬಳ್ಳಾರಿ, ರಾಜು ಮನ್ನಿಕೇರಿ, ಅನೀಲಕುಮಾರ ದಡ್ಡಿ ಇದ್ದರು.