ಬಾಗಲಕೋಟೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ತಾಲೂಕ ಘಟಕ ದಿಂದ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಹೈದರಬಾದನ ಗೀತಂ ವಿಶ್ವವಿದ್ಯಾಲಯದ ಉಪಕುಲಪತಿ ಬಸವರಾಜ ಕಟಗೇರಿ, ಶಾಸಕ ಉಮೇಶ ಮೇಟಿ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬುಮಾ ಅಧ್ಯಕ್ಷ ರವಿ ಕುಮಟಗಿ, ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಹೊಳೆಬಸು ಬಾಳಶೆಟ್ಟಿ ಇದ್ದರು. 
ಬಾಗಲಕೋಟೆ

ಆಳುವ ಬ್ರಿಟಿಷರಿಗೆ ಸಾಲ ಕೊಟ್ಟ ಸಮಾಜ ಬಣಜಿಗ

ಆಳುವ ಬ್ರಿಟಿಷರಿಗೆ ಸಾಲ ಕೊಟ್ಟ ಸಮಾಜ ಬಣಜಿಗ ಸಮಾಜ. ಅಂದ ಮಾತ್ರಕ್ಕೆ ನಮ್ಮ ಮಕ್ಕಳ ಭವಿಷತ್ತಿಗಾಗಿ ಕೈಕಟ್ಟಿ ಕೂಡುವಂತಿಲ್ಲ. ಕೌಶಲ ಪೂರ್ಣ ವೃತ್ತಿಪರ ವಿಚಾರಗಳನ್ನು ಮಕ್ಕಳಲ್ಲಿ ಬಿತ್ತಿದಾಗ ಭವಿಷ್ಯದ ದಿನಗಳಲ್ಲಿ ನಮ್ಮನ್ನು ನಾವು ಕಾಪಾಡಿಕೊಂಡAತಾಗುತ್ತದೆ ಎಂದು ಹೈದರಬಾದನ ಗೀತಂ ವಿಶ್ವವಿದ್ಯಾಲಯದ ಉಪಕುಲಪತಿ ಬಸವರಾಜ ಕಟಗೇರಿ ಹೇಳಿದರು.

ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ತಾಲೂಕ ಘಟಕ ದಿಂದ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಂಕಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಮತ್ತು ಆತನ ಸಾಮರ್ಥ್ಯದ ಮಾನದಂಡವಲ್ಲ. ಅಂಕಗಳು ಉನ್ನತ ಶಿಕ್ಷಣಕ್ಕಾಗಿ ಪಡೆಯುವ ಒಂದು ಕೇವಲ ಟಿಕೆಟ್ ಮಾತ್ರ ಅಂತ ವ್ಯಾಖ್ಯಾನಿಸಿದರು.
ಪ್ರತಿಭಾ ಪುರಸ್ಕಾರ ದಂತಹ ಕಾರ್ಯಕ್ರಮ ಯಾವುದೇ ಸಮಾಜ ತನ್ನ ಪೀಳಿಗೆಯ ಭವಿಷ್ಯಕ್ಕಾಗಿ ಮಾಡುವ ಉನ್ನತ ಕಾರ್ಯವಾಗಿದೆ. ಬಣಜಿಗೆ ಸಮಾಜ ಮಾಡುವ ಈ ಕೆಲಸ ದೊಂದಿಗೆ ವೃತ್ತಿಪರ ಕೌಶಲ ಪೂರ್ಣ ಮಾರ್ಗದರ್ಶನ ಕೊಡುವ ಶಿಬಿರ ಆಯೋಜಿಸಬೇಕು ತಾವು ಸಹಕಾರ ನೀಡುವದಾಗಿ ಎಂದರು.
ಬಾಗಲಕೋಟೆ ಶಾಸಕ ಉಮೇಶ ಮೇಟಿ ಮಾತನಾಡಿ, ಬಹುದಿನಗಳಿಂದ ಬಣಜಿಗ ಸಮಾಜದ ಬೇಡಿಕೆಗೆ ನಮ್ಮ ಸ್ಪಂದನೆ ಇದೆ. ಬಿಟಿಡಿಎ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ ಅವರೊಂದಿಗೆ ಚರ್ಚಿಸಿ ಬಣಜಿಗ ಸಂಘಕ್ಕೆ ನಿವೇಶನವನ್ನು ನೀಡುವ ಭರವಸೆ ನೀಡಿದರು.
ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಬಣಜಿಗ ಸಮಾಜದ ದಿವಂಗತ ಜೆ.ಎಚ್.ಪಟೇಲರು ಬಾಗಲಕೋಟೆಗೆ ಅನನ್ಯ ಉಪಕಾರ ಮಾಡಿದ್ದಾರೆ ಆದರೆ ಬಾಗಲಕೋಟೆಯ ಜನರಿಂದ ಅವರ ಹೆಸರಿನಲ್ಲಿ ಸ್ಮರಣೆಗಾಗಿ ಒಂದು ಸ್ಮಾರಕವನ್ನು ಕಟ್ಟಲಿಲ್ಲ ಎಂದು ವಿಷಾಧನೀಯ, ಮುಂದಿನ ವರ್ಷದೊಳಗಾಗಿ ಬಣಜಿಗ ಸಂಘಕ್ಕೆ ನಿವೇಶನವೊಂದನ್ನು ಕೊಡುವದಾಗಿ ಭರವಸೆ ನೀಡಿದರು.
ಬಸವೇಶ್ವರ ಸಹಕಾರಿ ಸಂಘ ಮತ್ತು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿಯೂ ಬಣಜಿಗ ಸಮಾಜದ ಕೊಡುಗೆ ಅನನ್ಯವಾಗಿದೆ. ಸಹಕಾರಿ ಸಂಘದಲ್ಲಿ ಕಳೆದ ೪೨ ವರ್ಷಗಳಿಂದ ಅಧ್ಯಕ್ಷನಾಗಿ ಮತ್ತು ನಗರಸಭೆಯ ಯಶಸ್ವಿ ಅಧ್ಯಕ್ಷನಾಗಿ ಕೆಲಸ ಮಾಡಲು ಸಮಾಜದ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರಲ್ಲದೇ ಬಸವೇಶ್ವರ ಬ್ಯಾಂಕಿನಿAದ ಕೊಡ ಮಾಡುವ ವಿದ್ಯಾ ಚೇತನ ಕಾರ್ಯಕ್ರಮದ ಲಾಭವನ್ನು ಸಮಾಜದ ಮಕ್ಕಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬುಮಾ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ಬಾಗಲಕೋಟೆ ಮಾರುಕಟ್ಟೆ ಮುಳಗಡೆಯಿಂದಾಗಿ ಹಾಳಾಗಿದೆ. ಮತ್ತೆ ಪುರುತ್ಥಾನಗೊಳ್ಳಲು ಒಂದೇ ಕಡೆಗೆ ೨೦೦ ಎಕರೆ ಜಾಗೆಯ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ಅನಿವಾರ್ಯವಾಗಿದೆ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಆನಂದ ಜಿಗಜಿನ್ನಿ ಮಾತನಾಡಿ, ಪ್ರತಿಭೆ ಗುರುತಿಸಿ ಪುರಸ್ಕರಿಸುವ ಸಮಾಜದ ಜವಾಬ್ದಾರಿಯಾಗಿದೆ. ಬೆಳೆಯುವ ಮಕ್ಕಳಿಗೆ ಉತ್ತೇಜನ ಸಿಗಲಿ ಎನ್ನುವ ಕಾರಣಕ್ಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಹೊಳೆಬಸು ಬಾಳಶೆಟ್ಟಿ ಅವರು ಸಂಘಟನೆಯ ಕುರಿತು ಮಾತನಾಡಿದರು. ಬಾಗಲಕೋಟೆ ತಾಲೂಕಾ ಬಣಜಿಗ ಸಂಘದ ಅಧ್ಯಕ್ಷ ವೀರಭದ್ರಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಅಂಗಡಿ, ಮುರುಗೇಶ ಶಿವನಗುತ್ತಿ, ಅರವಿಂದ ನಾವಲಗಿ, ಬಸವರಾಜ ಸೊಬರದ, ಮಹಾಂತೇಶ ಜೋಳದ, ವಿದ್ಯಾವತಿ ಹೆಬ್ಬಾಳ, ಮೇಘಾ ಆನಂದ ಜಿಗಜಿನ್ನಿ ಇದ್ದರು. ನವಮಿ ಹೊಸಕೇರಿ ಪ್ರಾರ್ಥಿಸಿದರು. ಅನುಷಾ ಭರತನಾಟ್ಯ ಗಮನ ಸೆಳೆಯಿತು.