ಬಾಗಲಕೋಟೆ ನಗರದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಒಪಿಡಿ ಸಭಾಂಗಣದಲ್ಲಿ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಥಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮವನ್ನು ಡಾ.ಭುವನೇಶ್ವರಿ ಯಳಮಲಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ದೀಲಿಪ್ ಎಸ್. ನಾಟೇಕಾರ, ಡಾ.ಅಶೋಕ ಬಡಕಲಿ, ಡಾ.ದಾನೇಶ್ವರಿ ಹಿರೇಮಠ, ಡಾ.ನಿಂಗನಗೌಡ ಜಿ. ಪಾಟೀಲ, ಡಾ.ಪ್ರಶಾಂತ ಕುಲಕರ್ಣಿ ಇದ್ದರು.  
ಬಾಗಲಕೋಟೆ

ಕುಮಾರೇಶ್ವರ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ಡಾ.ಭುವನೇಶ್ವರಿ ಯಳಮಲಿ ಹೇಳಿಕೆ
  • ವಿಶ್ವ ಥಲಸ್ಸೆಮಿಯಾ ದಿನಾಚರಣೆ
  • ಭಾರತದಲ್ಲಿ ಅಂದಾಜು ಸರಾಸರಿ 3-4 ಪ್ರತಿಶತ ಬಿ. ಥಲಸ್ಸೆಮಿಯಾ ವಾಹಕಗಳ ಹರಡುವಿಕೆ ಇದೆ.
ಬಾಗಲಕೋಟೆ: ಕುಮಾರೇಶ್ವರ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಥಲಸ್ಸೆಮಿಯಾ ಘಟಕ ಹೊಂದಿದ್ದು, ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಡಾ.ಭುವನೇಶ್ವರಿ ಯಳಮಲಿ ಹೇಳಿದರು.
ನಗರದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಒಪಿಡಿ ಸಭಾಂಗಣದಲ್ಲಿ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಥಲಸ್ಸೆಮಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಅಂದಾಜು ಸರಾಸರಿ 3-4 ಪ್ರತಿಶತ ಬಿ. ಥಲಸ್ಸೆಮಿಯಾ ವಾಹಕಗಳ ಹರಡುವಿಕೆ ಇದೆ. ಹಾನಗಲ್ ಕುಮಾರೇಶ್ವರ ಆಸ್ಪತ್ರೆಯೂ ಕೂಡ 100 ಹಾಸಿಗೆಗಳ ಥಲಸ್ಸೆಮಿಯಾ ಘಟಕವನ್ನು ಹೊಂದಿದ್ದು, ಈ ವಿಭಾಗಕ್ಕೆ ಚಿಕಿತ್ಸೆಗೆ ಎಲ್ಲ ಮಕ್ಕಳಿಗೆ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ಈ ವಿಭಾಗದ ಸೇವೆಗಾಗಿ 2022ರಲ್ಲಿ ಆಸ್ಪತೆಗೆ ಹಾಗೂ ವಿಭಾಗದ ಮುಖ್ಯಸ್ಥರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಶ್ಲಾಘನೀಯ ಎಂದರು.
ಅನುವಂಶಿಕತೆಯಿಂದ ಬರುವ ರಕ್ತದ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಥಲಸ್ಸೆಮಿಯಾ ದಿನ ಪ್ರತಿ ವರ್ಷ ಆಚರಣೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಈ ಖಾಯಿಲೆಯಿಂದ ಬಳಲುತ್ತಿದ್ದು, ಅವರ ಬದುಕಿಗೆ ಬೆಂಬಲವಾಗಿ ನಿಂತು, ನೈತಿಕ ಸ್ಥೈರ್ಯ ತುಂಬುವ ಕೆಲಸದ ಜೊತೆಗೆ ಸೂಕ್ತ ಚಿಕಿತ್ಸೆ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ದೀಲಿಪ್ ಎಸ್. ನಾಟೇಕಾರ ಮಾತನಾಡಿ, ಆರೋಗ್ಯ ಶುಶ್ರೂಷಕರು ಹಾಗೂ ಆರೋಗ್ಯ ಶುಶ್ರೂಷಾ ಬೋಧಕ ಸಿಬ್ಬಂದಿಗಳು ಸಮುದಾಯಕ್ಕೆ ಭೇಟಿ ನೀಡಿ, ಥಲಸ್ಸೆಮಿಯಾ ರೋಗವನ್ನು ತಡೆಗಟ್ಟುವಿಕೆ, ಗುಣಪಡಿಸುವ ವಿಧಾನಗಳು ಮತ್ತು ಥಲಸ್ಸೆಮಿಯಾ ರೋಗಿಗಳ ಆರೈಕೆಯ ಬಗ್ಗೆ ಹಾಗೂ ಥಲಸ್ಸೆಮಿಯಾ ಬಾಧಿತ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಮಾತನಾಡಿ, ಥಲಸ್ಸೇಮಿಯಾ ರೋಗದ ಹೊಸ ಚಿಕಿತ್ಸಾ ವಿಧಾನಗಳು ಮತ್ತು ರೋಗ ನಿಯಂತ್ರಿಸುವ ಕುರಿತು ಅನೇಕ ಸಂಶೋಧನೆಗಳನ್ನು ನಡೆಸುವುದು ಅತ್ಯವಶ್ಯಕವಾಗಿದೆ ಎಂದು ವಿವರಿಸಿದರು.
ಐದನೇ ಸೆಮೆಸ್ಟರ್ ಹಾಗೂ ಪಿ.ಬಿ.ಬಿಎಸ್ಸಿ ವಿದ್ಯಾರ್ಥಿಗಳಿಂದ ಮೂಕಾಭಿನಯ ಹಾಗೂ ಕಿರುನಾಟಕದ ಪ್ರದರ್ಶನದ ಮೂಲಕ ಜನರಲ್ಲಿ ಥಲಸ್ಸೆಮಿಯಾ ರೋಗದ ಕುರಿತು ಅರಿವು ಮೂಡಿಸಲಾಯಿತು.
ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ.ದಾನೇಶ್ವರಿ ಹಿರೇಮಠ, ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ಪ್ರಾಧ್ಯಾಪಕ ಡಾ.ನಿಂಗನಗೌಡ ಜಿ. ಪಾಟೀಲ, ಡಾ.ಪ್ರಶಾಂತ ಕುಲಕರ್ಣಿ, ಸಂತೋಷ ಸಜ್ಜನ, ರೇಣುಕಾ ಜಾಲಿಹಾಳ, ರಾಜಶೇಖರ ಕಾಬನೂರ, ಶಿವಾನಂದ ಡಿ.ಮಹಾಂತೇಶಗೌಡ ಉಪಸ್ಥಿತರಿವರು.