ಬನಹಟ್ಟಿಯ ಸೈಜಿಂಗ್ ಘಟಕದಲ್ಲಿ ಮುಷ್ಕರ ಅಂತ್ಯಗೊಂಡ ಬಳಿಕ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರು.
- ಶೇ.8.5 ವೇತನ ಹೆಚ್ಚಳಕ್ಕೆ ಒಪ್ಪಂದ
- ಸೈಜಿಂಗ್ ಘಟಕಗಳ ಕಾರ್ಯಾರಂಭ
ರಬಕವಿ/ಬನಹಟ್ಟಿ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಬನಹಟ್ಟಿಯ ಸೈಜಿಂಗ್ ಘಟಕಗಳ ಕಾರ್ಮಿಕರು ಹಾಗೂ ಮಾಲೀಕರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಶೇ.8.5ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಂದವಾಗಿದೆ. ಅದರೊಂದಿಗೆ ಬುಧವಾರದಿಂದ ಎಲ್ಲ ಸೈಜಿಂಗ್ ಘಟಕಗಳು ಪುನರಾರಂಭಗೊಂಡಿದ್ದು, ಜವಳಿ ಉದ್ಯಮದಲ್ಲಿ ಸಹಜ ಸ್ಥಿತಿ ಮರಳಿದೆ.
ರಬಕವಿ-ಬನಹಟ್ಟಿ ರಾಜ್ಯದ ಪ್ರಮುಖ ಜವಳಿ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ಕುಟುಂಬಗಳು ಪವರ್‌ಲೂಮ್ ಹಾಗೂ ಸೈಜಿಂಗ್ ಉದ್ಯಮವನ್ನು ಅವಲಂಬಿಸಿವೆ. ಮುಷ್ಕರದಿಂದ ನೂಲು ಸಂಸ್ಕರಣೆ ಮತ್ತು ಪೂರೈಕೆ ಸ್ಥಗಿತಗೊಂಡ ಪರಿಣಾಮ ನೂರಾರು ಪವರ್‌ಲೂಮ್ ಘಟಕಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಕಾರ್ಮಿಕರು, ಮಾಲೀಕರು ಹಾಗೂ ವ್ಯಾಪಾರಿಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿತ್ತು.
ಈ ಹಿನ್ನೆಲೆಯಲ್ಲಿ ಸೈಜಿಂಗ್ ಘಟಕಗಳ ಸಂಘದ ಅಧ್ಯಕ್ಷ ಬ್ರೀಜ್‌ಮೋಹನ್ ಡಾಗಾ, ಪ್ರಭು ಕರಲಟ್ಟಿ, ಮಲ್ಲಿಕಾರ್ಜುನ ಭದ್ರಣ್ಣವರ ಹಾಗೂ ಕಾರ್ಮಿಕ ಸಂಘಟನೆಯ ಅಧ್ಯಕ್ಷ ವಿ.ಟಿ. ಹಳಿಂಗಳಿ, ಉಪಾಧ್ಯಕ್ಷ ಎನ್.ಎಸ್. ದೇವರ ನೇತೃತ್ವದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಲಾಯಿತು. ಅಂತಿಮವಾಗಿ ಶೇ.8.5ರಷ್ಟು ವೇತನ ಹೆಚ್ಚಳಕ್ಕೆ ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿದ್ದು, ಎರಡು ವರ್ಷಗಳ ಅವಧಿಗೆ ಈ ಒಪ್ಪಂದ ಜಾರಿಯಲ್ಲಿರಲಿದೆ. ಒಪ್ಪಂದಕ್ಕೆ ಎರಡೂ ಸಂಘಟನೆಗಳ ಪ್ರತಿನಿಧಿಗಳು ಲಿಖಿತವಾಗಿ ಸಹಿ ಹಾಕಿದ್ದಾರೆ.
ಬುಧವಾರ ಬೆಳಗ್ಗೆಯಿಂದಲೇ ಬನಹಟ್ಟಿಯ ಬಹುತೇಕ ಸೈಜಿಂಗ್ ಘಟಕಗಳಲ್ಲಿ ನೂಲು ಸಂಸ್ಕರಣೆ ಹಾಗೂ ಪೂರೈಕೆ ಪುನರಾರಂಭಗೊಂಡಿದೆ. ಇದರಿಂದ ಕಚ್ಚಾ ನೂಲಿನ ಕೊರತೆಯಿಂದ ಸ್ಥಗಿತಗೊಂಡಿದ್ದ ಪವರ್‌ಲೂಮ್ ಘಟಕಗಳೂ ಹಂತ ಹಂತವಾಗಿ ಕಾರ್ಯಾರಂಭ ಮಾಡುವ ನಿರೀಕ್ಷೆ ಮೂಡಿದೆ.
ಈಗಾಗಲೇ ಪವರ್‌ಲೂಮ್ ಕಾರ್ಮಿಕರಿಗೆ ಶೇ.10ರಷ್ಟು ವೇತನ ಹೆಚ್ಚಳ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಸೈಜಿಂಗ್ ಕಾರ್ಮಿಕರಿಗೂ ವೇತನ ಪರಿಷ್ಕರಣೆ ದೊರೆತಿರುವುದು ಜವಳಿ ಕ್ಷೇತ್ರದಲ್ಲಿ ಸ್ಥಿರತೆ ಹಾಗೂ ಉತ್ಪಾದನೆಗೆ ಉತ್ತೇಜನ ನೀಡಲಿದೆ.
ಸಹಮತದ ಮೂಲಕ ಕಾರ್ಮಿಕರು ಮತ್ತು ಮಾಲೀಕರ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ಒಪ್ಪಂದಕ್ಕೆ ಬರಲಾಗಿದೆ. ಜವಳಿ ಉದ್ಯಮದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸೈಜಿಂಗ್ ಘಟಕಗಳ ಸಂಘದ ಮುಖಂಡ ಪ್ರಭು ಕರಲಟ್ಟಿ ಮನವಿ ಮಾಡಿದ್ದಾರೆ.