ಜಮಖಂಡಿಯ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಎಸ್.ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಡಾ.ಟಿ.ಪಿ.ಗಿರಡ್ಡಿ, ಪ್ರಭಾರಿ ಪ್ರಾಚಾರ್ಯ ಎ.ಜಿ.ಮಳಗುಂಡಿ, ಉಪನ್ಯಾಸಕರಾದ ಎಲ್.ಬಿ. ಹಲಸಗಿ, ಪಿ.ಎಂ. ಮುಂದಿನಮನಿ, ಪ್ರಶಿಕ್ಷಣಾರ್ಥಿಗಳಾದ ಪವಿತ್ರಾ ಇಟ್ಟಿ, ಭಾಗ್ಯಾ ಕೋಲೂರಮಠ, ತಂಗೆಮ್ಮ ಕರಿಗೌಡರ ಇದ್ದರು.
- ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ
- ಶಿಕ್ಷಕರ ದಿನಾಚರಣೆ ಕಾರ್ಯಕ್ರಮ.
- ಹಣ, ಆಸ್ತಿ, ಸಂಪತ್ತು ಬಳಸಿದಷ್ಟು ಕರಗುತ್ತದೆ. ಆದರೆ, ಜ್ಞಾನವನ್ನು ಬಳಸಿದಷ್ಟು ಬೆಳೆಯುತ್ತದೆ.
ಜಮಖಂಡಿ: ಹಣ, ಆಸ್ತಿ, ಸಂಪತ್ತು ಬಳಸಿದಷ್ಟು ಕರಗುತ್ತದೆ. ಆದರೆ, ಜ್ಞಾನವನ್ನು ಬಳಸಿದಷ್ಟು ಬೆಳೆಯುತ್ತದೆ. ಜ್ಞಾನ 21ನೇ ಶತಮಾನದಲ್ಲಿ ಜಗತ್ತನ್ನು ಆಳುತ್ತಿದೆ. ಆದ್ದರಿಂದ ಶಿಕ್ಷಕರಾದವರಿಗೆ ಜ್ಞಾನದ ಹಸಿವು ಅಗತ್ಯ ಎಂದು ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ ಹೇಳಿದರು.
ನಗರದ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಹಾಗೂ ಡಾ.ಎಸ್.ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಶಿಕ್ಷಕರು ಸಂವಹನ ಕಲೆ, ವ್ಯವಹರಿಸುವ ಕಲೆ, ಕಾರ್ಯಕ್ಷಮತೆ, ಸೃಜಶೀಲತೆ ಮೈಗೂಡಿಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕ ವೃತ್ತಿ ಹಾಗೂ ಶಿಕ್ಷಕರ ಬಗ್ಗೆ ಅಪಾರವಾದ ಗೌರವ, ನಿಷ್ಠೆ ಹೊಂದಿದ ಅಗ್ರಗಣ್ಯ ಶಿಕ್ಷಕರಲ್ಲಿ ಒಬ್ಬರಾಗಿದ್ದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ಅವರನ್ನು ತಲೆಯ ಮೇಲೆ ಹೊತ್ತು ಹೃದಯದಲ್ಲಿ ಇಟ್ಟು ಶಿಕ್ಷಕರು ಪೂಜಿಸಬೇಕು ಎಂದು ತಿಳಿಸಿದರು.
ಪ್ರಭಾರಿ ಪ್ರಾಚಾರ್ಯ ಎ.ಜಿ.ಮಳಗುಂಡಿ ಮಾತನಾಡಿ, ಶಿಕ್ಷಕರು ತರಗತಿಗೆ ತೆರಳುವ ಮೊದಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವಂತೆ ಪ್ರೋತ್ಸಾಹಿಸಬೇಕು ಎಂದರು.
ಉಪನ್ಯಾಸಕರಾದ ಎಲ್.ಬಿ. ಹಲಸಗಿ, ಪಿ.ಎಂ. ಮುಂದಿನಮನಿ, ಪ್ರಶಿಕ್ಷಣಾರ್ಥಿಗಳಾದ ಪವಿತ್ರಾ ಇಟ್ಟಿ, ಭಾಗ್ಯಾ ಕೋಲೂರಮಠ, ತಂಗೆಮ್ಮ ಕರಿಗೌಡರ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶಶಿಕಾಂತ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎ.ಟಿ. ಮೀಶಿ, ಪ್ರವೀಣ ಕುಲಕರ್ಣಿ, ಎಸ್.ಕೆ. ಪರೀಟ, ಗ್ರಂಥಪಾಲಕ ಎಸ್.ಎಂ. ಅಥಣಿ ಇದ್ದರು. ದಿವ್ಯಾ ಉಮರಾಣಿ ಪ್ರಾರ್ಥಿಸಿದರು. ಅಂಜಲಿ ಮಾದರ ಸ್ವಾಗತಿಸಿದರು. ಸ್ವಾತಿ ಬುದ್ನಿ ಪರಿಚಯಿಸಿದರು. ಅನಿತಾ ಮೆಂಗಾಣಿ, ಹನಮಂತ ವಾಲಿಕಾರ ನಿರೂಪಿಸಿದರು. ಅಬೂಬಕರ ಅನ್ಸಾರಿ ವಂದಿಸಿದರು.