ರಬಕವಿಯ ಬ್ರಹ್ಮಾನಂದ ನಗರದ ವಿಜಯ ಹೂಗಾರ ಅವರ ನಿವಾಸದಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಜರುಗಿದ ಐವತ್ತನೇ ತಿಂಗಳ ಪುಸ್ತಕಾವಲೋಕನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಂ.ಎಸ್. ಬದಾಮಿ, ರಾಜೇಶ ನೋಟದ, ಮ.ಕ. ಮೇಗಾಡಿ, ಶಿವಾನಂದ ಶೆಲ್ಲಿಕೇರಿ ಇದ್ದರು. 
ಬಾಗಲಕೋಟೆ

ಟಾಟಾ, ಬಿರ್ಲಾ ಆರ್ಥಿಕ ವ್ಯವಸ್ಥೆಯ ಕಣ್ಮಣಿಗಳು

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ರಾಜೇಶ ನೋಟದ ಅನಿಸಿಕೆ
  • ಪುಸ್ತಕಾವಲೋಕನಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ
  • ಸಾಹಿತ್ಯ ಸಿಂಚನ ಕತಿ ಲೋಕಾರ್ಪಣೆ
ರಬಕವಿ/ಬನಹಟ್ಟಿ: ದೇಶ ಕಂಡ ಶ್ರೇಷ್ಠ ಉದ್ದಿಮೆದಾರರಲ್ಲಿ ಟಾಟಾ ಮತ್ತು ಬಿರ್ಲಾ ಪ್ರಮುಖರು, ಇಬ್ಬರೂ ದೇಶದ ಆರ್ಥಿಕ ಕಣ್ಣುಗಳು. ಭಾರತದ ಗೌರವವನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿಗಳು ಎಂದು ಮಡಿವಾಳಪ್ಪ ವೀರಪ್ಪ ಪಟ್ಟಣ ಪ.ಪೂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ರಾಜೇಶ ನೋಟದ ತಿಳಿಸಿದರು.
ರಬಕವಿಯ ಬ್ರಹ್ಮಾನಂದ ನಗರದ ನಿವಾಸಿ ವಕೀಲ ವಿಜಯ ಹೂಗಾರ ಅವರ ನಿವಾಸದಲ್ಲಿ ಭಾನುವಾರ ತಾಲೂಕು ಕಸಾಪ ಆಶ್ರಯದಲ್ಲಿ ಜರುಗಿದ ಐವತ್ತನೇ ತಿಂಗಳ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ನಿವತ್ತ ಉಪನ್ಯಾಸಕ ಎಂ.ಎಸ್. ಬಾದಾಮಿ ರಚಿಸಿದ ‘ರತನ್ ಟಾಟಾ’ ಕತಿ ಅವಲೋಕಿಸಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕನ್ನಡ ಸಾಹಿತ್ಯ ಸಮಾಜಮುಖಿಯಾಗಿ ಪರಿಷತ್ತು ಕಾರ್ಯ ಮಾಡುತ್ತಿದೆ. ಐವತ್ತಕ್ಕೂ ಹೆಚ್ಚು ದತ್ತಿ ಉಪನ್ಯಾಸಗಳನ್ನು ಮಾಡಲಾಗಿದೆ. ರಾಜ್ಯ ಘಟಕಕ್ಕೆ ಜಿಲ್ಲೆಯಿಂದ ಹನ್ನೆರಡು ಲಕ್ಷ ರೂ. ದತ್ತಿ ನಿಧಿ ಹಣವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಕಸಾಪ ಆಯೋಜನೆ ಮಾಡಲಿದೆ ಎಂದರು.
ಬೆಂಗಳೂರಿನ ನೇಯ್ಕೆ ನುಡಿ ಮಾಸಿಕ ಪತ್ರಿಕೆಯ ಸಂಪಾದಕ ಬೆಳ್ಳಿಚುಕ್ಕಿ ವೀರೇಂದ್ರ ಅವರು ತಿಂಗಳ ಪುಸ್ತಕಾವಲೋಕನ ಕಾರ್ಯಕ್ರಮದ ಐವತ್ತು ಉಪನ್ಯಾಸಕ ಮಾಲಿಕೆಯ ಸಾಹಿತ್ಯ ಸಿಂಚನ ಕತಿ ಲೋಕಾರ್ಪಣೆಮಾಡಿ ಮಾತನಾಡಿ, ಬೆಂಗಳೂರಿನಲ್ಲಿ ಈ ರೀತಿಯ ಕನ್ನಡ ಕೆಲಸ ಕಾರ್ಯಗಳು ಆಗುತ್ತಿಲ್ಲ. ನಿಜವಾದ ಸಾಹಿತಿಗಳಿಗೆ ಸಿಗಬೇಕಾದ ಮನ್ನಣೆ ಅಲ್ಲಿ ಸಿಗುತ್ತಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದ ಕೆಲಸಗಳು ನಿರಂತರ ನಡೆಸುತ್ತಿರುವುದು ಮಾದರಿಯಾಗಿ ಮನೆ-ಮನಗಳನ್ನು ಇಲ್ಲಿಯ ಕಸಾಪ ತಲುಪಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮ.ಕ. ಮೇಗಾಡಿ, ಹಿರಿಯ ಸಾಹಿತಿ ಶಿವಾನಂದ ದಾಶಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಕೀಲ ವಿಜಯ ಹೂಗಾರ ಅಧ್ಯಕ್ಷತೆ ವಹಿಸಿದ್ದರು.
ತಮ್ಮಣ್ಣ ಗಿರಡ್ಡಿ, ಬಸವಪ್ರಭು ಹಟ್ಟಿ, ಕಿರಣ ಆಳಗಿ, ಯಶವಂತ ವಾಜಂತ್ರಿ, ವಿಶ್ವಜ ಕಾಡದೇವರ, ಬಸವರಾಜ ಮೇಟಿ, ಬಸವರಾಜ ಕೊಣ್ಣೂರ, ತೇರದಾಳ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ದಾನಪ್ಪ ಆಸಂಗಿ, ಅನ್ನಪೂರ್ಣ ಹೂಗಾರ, ರಾಮಣ್ಣಾ ಕೊಣ್ಣೂರ, ಎಂ. ಬಿ. ಇಂಡಿ, ಗುರುನಾಥ ಸುತಾರ, ಡಾ. ಡಿ.ಎ. ಬಾಗಲಕೋಟ, ಬಸವರಾಜ ದಲಾಲ, ದಾಕ್ಷಾಯಣಿ ಮಂಡಿ ಇತರರಿದ್ದರು. ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಶ್ರೀಶೈಲ ಬುರ್ಲಿ, ಮಾಧವಾನಂದ ಗುಟ್ಲಿ ನಿರೂಪಿಸಿದರು. ಈರಣ್ಣ ಗುಣಮುಖಿ ವಂದಿಸಿದರು.