ಮಹಾಲಿಂಗಪುರ ಪುರಸಭೆಯಲ್ಲಿ 2022-23ನೇ ಸಾಲಿನ ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯ ಫಲಾನುಭವಿಗಳಿಗೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಶಾಸಕ ಸಿದ್ದು ಸವದಿ ವಿತರಿಸಿದರು. ಪುರಸಭೆ ಮುಖ್ಯಾಽಕಾರಿ ನಾಮದೇವ ಲಮಾಣಿ, ಬಸನಗೌಡ ಪಾಟೀಲ, ಶಂಕರಗೌಡ ಪಾಟೀಲ ಇತರರಿದ್ದರು. 
ಬಾಗಲಕೋಟೆ

ಜನಪರ ಯೋಜನೆ ಸದುಪಯೋಗ ಪಡೆದುಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿದ್ದು ಸವದಿ ಹೇಳಿಕೆ
  • ಗೃಹೋಪಯೋಗಿ ವಸ್ತುಗಳ ವಿತರಣೆ
ಮಹಾಲಿಂಗಪುರ: ಸರ್ಕಾರದ ಯೋಜನೆಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ 2022-23ನೇ ಸಾಲಿನ ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಗಿರಿಜನರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ವಿವಿಧ ಗೃಹೋಪಯೋಗಿ ವಸ್ತುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಸ್ತುಗಳನ್ನು ದೀರ್ಘಕಾಲ ಉಪಯೋಗಿಸಿ ಕುಟುಂಬದ ಅಭಿವೃದ್ಧಿಗೆ ಪೂರಕವಾಗುವಂತೆ ಬಳಕೆ ಮಾಡಿಕೊಳ್ಳಬೇಕು. ಈ ಯೋಜನೆಯ ಒಟ್ಟು ವೆಚ್ಚ 10 ಕೋಟಿ ರೂ. ಈ ಹಿಂದೆ ನನ್ನ ಸಮ್ಮುಖದಲ್ಲಿಯೇ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿತ್ತು. ಆಯ್ಕೆಯಾದ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಯ ಸೌಲಭ್ಯ ತಲುಪಬೇಕು. ಆದರೆ ಸಂಬಂಧಿಸಿದ ಇಲಾಖೆಯಲ್ಲಿ ತಾತ್ಕಾಲಿಕ ಹಣಕಾಸಿನ ಕೊರತೆ ಉಂಟಾಗಿರುವುದರಿಂದ ಕೆಲವು ಫಲಾನುಭವಿಗಳಿಗೆ ಮಾತ್ರ ವಸ್ತುಗಳನ್ನು ವಿತರಿಸಲಾಗಿದ್ದು, ಉಳಿದವರಿಗೆ ಎರಡನೇ ಹಂತದಲ್ಲಿ ವಿತರಿಸಲಾಗುವುದು.
ಫಲಾನುಭವಿಗಳಿಗೆ ಸಂಕೇತಿಕವಾಗಿ ಲ್ಯಾಪ್‌ಟಾಪ್, ಬ್ಯಾಟರಿ ಹಾಗೂ ಇನ್ವರ್ಟರ್, ಹೊಲಿಗೆ ಯಂತ್ರಗಳು, ಶುದ್ಧ ಕುಡಿಯುವ ನೀರಿನ ಯಂತ್ರಗಳು, ಟ್ರೆಜರಿಗಳು ಸೇರಿ ವಿವಿಧ ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ, ಮುಖಂಡರಾದ ಗುರುಪಾದ ಅಂಬಿ, ಬಸನಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲಪ್ಪಾ ದಲಾಲ, ಶಿವಾನಂದ ಅಂಗಡಿ, ಶಿವನಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಯರಗಟ್ಟಿ, ಮಹೇಶ ಚಿಂಚಲಿ, ತಿಪ್ಪಣ್ಣಾ ಬಂಡಿವಡ್ಡರ, ಮಹೇಶ ಜಿಡ್ಡಿಮನಿ, ಶೇಖರ ಮಗದುಮ ಇದ್ದರು.