ಬಾದಾಮಿ ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ 2026-27ನೇ ಸಾಲಿನ ದಾಖಲಾತಿ ಆಂದೋಲನದ ಸಮೀಕ್ಷಾ ರಥ ಯಾತ್ರೆಗೆ ಬಿಇಒ ಕೇಶವ ಪೆಟ್ಲೂರ ಚಾಲನೆ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ, ಮುಖ್ಯಶಿಕ್ಷಕಿ ಬಸಮ್ಮಾ ನರಸಾಪುರ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕ ಎಂ.ಸಿ.ನಾಲತವಾಡ, ವೈ.ಬಿ.ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಾವೇದ ಶೇಖ್ ಇದ್ದರು.  
ಬಾಗಲಕೋಟೆ

ದಾಖಲಾತಿ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಬಿಇಒ ಕೇಶವ ಪೆಟ್ಲೂರ ಹೇಳಿಕೆ
  • ಗಾಂಧಿ ಬಾಲಕಿಯರ ವಸತಿ ಶಾಲೆಗೆ ದಾಖಲಾತಿ ಆಂದೋಲನ
  • ಶಾಲೆಯಿಂದ ವಂಚಿತರಾಗಿರುವ ಅರ್ಹ ಹೆಣ್ಣು ಮಕ್ಕಳನ್ನು ಕೆಜಿಬಿವಿ ವಸತಿ ಶಾಲೆಗೆ ಸೇರಿಸಲು ಮಾಹಿತಿ ನೀಡಿ
ಬಾದಾಮಿ: ಗ್ರಾಮೀಣ ಪಟ್ಟಣ ಪ್ರದೇಶದಲ್ಲಿ ಶಾಲೆಯಿಂದ ವಂಚಿತರಾಗಿರುವ ಅರ್ಹ ಹೆಣ್ಣು ಮಕ್ಕಳನ್ನು ಕೆಜಿಬಿವಿ ವಸತಿ ಶಾಲೆಗೆ ಸೇರಿಸಲು ಮಾಹಿತಿ ನೀಡಿ ದಾಖಲಾತಿ ಮಾಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಮನವಿ ಮಾಡಿದರು.
ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಬುಧವಾರ 2026-27ನೇ ಸಾಲಿನ ದಾಖಲಾತಿ ಆಂದೋಲನದ ಸಮೀಕ್ಷಾ ರಥ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಯಿಂದ ಹೊರಗುಳಿದ 11ರಿಂದ 14 ವಯೋಮಾನದ 6ರಿಂದ 8 ನೇ ತರಗತಿಯ ಬಾಲಕಿಯರಿಗಾಗಿ ಉಚಿತ ಸೌಲಭ್ಯ ದೊಂದಿಗೆ ಸ್ಥಾಪಿತವಾದ ಏಕೈಕ ವಸತಿ ಶಾಲೆ ಇದಾಗಿದೆ. ಶಾಲೆಬಿಟ್ಟ, ಶಾಲೆಗೆ ದಾಖಲಾಗದ ಬಾಲಕಿಯರು. ಎಸ್ಸಿ, ಎಸ್ಟಿ ಅಲ್ಪಸಂಖ್ಯಾತರ ಮಕ್ಕಳು, ಅನಾಥ ಮಕ್ಕಳು, ಯಾವುದೇ ಸಮಸ್ಯೆಯಿಂದ ಶಾಲೆಗೆ ಹೋಗದೇ ಇರುವ ಮಕ್ಕಳನ್ನು ಕರೆ ತಂದು ದಾಖಲಿಸಲು ಅಧಿಕಾರಿಗಳು ತಮ್ಮ ಕ್ಷೇತ್ರಮಟ್ಟದಲ್ಲಿ ವ್ಯಾಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಅರ್ಹ ಹೆಣ್ಣುಮಕ್ಕಳು ಮೇ 26ರಿಂದ ಜೂನ್ 1 ರೊಳಗೆ ಆನ್‌ಲೈನ್ ಮೂಲಕ ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯಶಿಕ್ಷಕಿ ಬಸಮ್ಮಾ ನರಸಾಪುರ ಮೊ. 9449142409 ಸಂಪರ್ಕಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಕೆಜಿಬಿವಿ ಶಾಲೆಯಲ್ಲಿ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಬಸಮ್ಮಾ ನರಸಾಪುರ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕ ಎಂ.ಸಿ.ನಾಲತವಾಡ, ವೈ.ಬಿ.ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಾವೇದ ಶೇಖ್, ಎಸ್.ಎಸ್.ಯಲಿಗಾರ ಸೇರಿ ಇತರರು ಉಪಸ್ಥಿತರಿದ್ದರು.