ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹೆದ್ದಾರಿ ರಸ್ತೆ ಸುರಕ್ಷತೆ ಕುರಿತು ಜಿಲ್ಲಾ ಟಾಸ್ಕ್ ಪೋರ್ಸ್ ಸಭೆ ನಡೆಸಿದರು. ಎಸ್ಪಿ ಸಿದ್ಧಾರ್ಥ ಗೋಯಲ್, ಜಿಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಇತರರಿದ್ದರು.
- ಅಧಿಕಾರಿಗಳಿಗೆ ಡಿಸಿ ಸಂಗಪ್ಪ. ಎಂ ಸೂಚನೆ
- ಹೆದ್ದಾರಿ ರಸ್ತೆ ಸುರಕ್ಷತೆ ಕುರಿತು ಟಾಸ್ಕ್ ಪೋರ್ಸ್ ಸಮಿತಿ ಸಭೆ
ಬಾಗಲಕೋಟೆ: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳಲ್ಲಿ ವಾಹನ ಸಂಚಾರದ ಸುರಕ್ಷತೆಗೆ ಅಡ್ಡಿಯಾಗಿರುವ ಅನಧಿಕೃತ ವಾಣಿಜ್ಯ ಕಟ್ಟಡಗಳು ಹಾಗೂ ದಾಬಾಗಳನ್ನು ಗುರುತಿಸಿ ನಿಯಮಾನುಸಾರ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹೆದ್ದಾರಿ ರಸ್ತೆ ಸುರಕ್ಷತೆ ಕುರಿತು ಬುಧವಾರ ಜರುಗಿದ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾರಿ ರಸ್ತೆ ವ್ಯಾಪ್ತಿಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿದೆ. ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾರ್ಕಿಂಗ್ ಮಾಡಿಕೊಟ್ಟಲ್ಲಿ ಲೋಕೋಪಯೋಗಿ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಜಂಟಿ ಸರ್ವೆ ಕೈಗೊಂಡು ಅತಿಕ್ರಮಣಗಳ ಪಟ್ಟಿ ಮಾಡಲು ಕ್ರಮವಹಿಸಲಾಗುತ್ತದೆ ಎಂದರು.
ಅಪಘಾತ ಹೆಚ್ಚಾಗಿ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಚ್ಚರಿಕೆ ಫಲಕಗಳ ಅಳವಡಿಕೆ, ವೇಗ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಅನುಷ್ಠಾನಗೊಳಿಸಿದ ಬಗ್ಗೆ ಸಂಬಂಧಿಸಿದ ಇಲಾಖೆಗಳು ಮಾಹಿತಿ ನೀಡುವ ಕೆಲಸವಾಗಬೇಕು. ಪಾರ್ಕಿಂಗ್ ವ್ಯವಸ್ಥೆ, ಸೌಲಭ್ಯಗಳ ಹಾಗೂ ಇತರೆ ಕಾರ್ಯ ಕೈಗೊಂಡ ಬಗ್ಗೆ ಅನುಸರಣಾ ವರದಿ ನೀಡಬೇಕು. ಕೆಲವೊಂದು ಹೆದ್ದಾರಿ ರಸ್ತೆಗಳಲ್ಲಿ ಬಿಳಿ ಪಟ್ಟಿ ಇರುವುದಿಲ್ಲ. ಬಿಳಿ ಪಟ್ಟಿ ಹಾಕಲು ತಕ್ಷಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾತನಾಡಿ, ರಸ್ತೆ ಅತಿಕ್ರಮಣ ತೆರವಿಗೆ ಪೊಲೀಸ್ ಇಲಾಖೆ ಸಹಕಾರ ನೀಡಲಿದ್ದು, ಇದಕ್ಕೂ ಮೊದಲು ಎಲ್ಲೆಲ್ಲಿ ಅತಿಕ್ರಮವಾಗಿದೆ ಎಂಬುವುದರ ಬಗ್ಗೆ ಪಟ್ಟಿ ಮಾಡಿಕೊಳ್ಳಿ. ನಂತರ ತೆರವಿಗೆ ಕ್ರಮವಹಿಸಲು ಅನುಕೂಲವಾಗುತ್ತದೆ. ಈ ಕಾರ್ಯದಲ್ಲಿ ಜಂಟಿ ಕಾರ್ಯಾಚರಣೆ ಅಗತ್ಯವಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿ ರಸ್ತೆಗಳಲ್ಲಿ ಅತಿಕ್ರಮಣಗೊಂಡ ಬಗ್ಗೆ ಮಾಹಿತಿ ನೀಡಿದಲ್ಲಿ, ಪರವಾನಗಿ ಪಡೆದಿದ್ದಲ್ಲಿ ರದ್ದತಿಗೆ ಹಾಗೂ ಪರವಾನಗಿ ಕೊಡದಂತೆ ಕ್ರಮ ಜರುಗಿಸುವಂತೆ ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಅವರಿಗೆ ತಿಳಿಸಲಾಯಿತು.
ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ದುರ್ಗಾದಾಸ್, ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಪವನಕುಮಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರಶೇಖರ ಪಾಟೀಲ, ಜಿಲ್ಲಾ ಸಂಚಾರಿ ಅಧಿಕಾರಿ ಕೆ.ಕೆ.ಲಮಾಣಿ ಸೇರಿ ಇತರರು ಉಪಸ್ಥಿತರಿದ್ದರು.