ಮುಧೋಳದ ಮಲಘಾಣ ಆಸ್ಪತ್ರೆಯಲ್ಲಿ 42 ವರ್ಷದ ಮಹಿಳೆಯ ಗರ್ಭಾಶಯದಿಂದ ಯಶಸ್ವಿಯಾಗಿ ತೆರವುಗೊಳಿಸಿದ 2.6 ಕೆ.ಜಿ. ಫೈಬ್ರಾಯ್ಡ್ ಗಡ್ಡೆಯನ್ನು ತೋರಿಸುತ್ತಿರುವ ಡಾ. ವೀರೇಂದ್ರ ಕೊಟಬಾಲ್, ಡಾ. ದೀಪಕ್ ಮಾಸರಡ್ಡಿ, ಡಾ. ಆಶಾ ಮಲಘಾಣ ಹಾಗೂ ಆಸ್ಪತ್ರೆಯ ಸಿಬ್ಬಂದಿ. 
ಬಾಗಲಕೋಟೆ

2.6 ಕೆ.ಜಿ. ಗರ್ಭಕೋಶದ ಗಡ್ಡೆ ಯಶಸ್ವಿ ತೆರವು

ಪ್ರಮುಖ ಮುಖ್ಯಾಂಶಗಳು

  • ಮುಧೋಳದ ಮಲಘಾಣ ಆಸ್ಪತ್ರೆಯಲ್ಲಿ ವೈದ್ಯರ ಸಾಧನೆ
  • ಎರಡು ಗಂಟೆ ನಡೆದ ಶಸ್ತ್ರಚಿಕಿತ್ಸೆ
ಮುಧೋಳ : ನಗರದ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಮಲಘಾಣ ಆಸ್ಪತ್ರೆಯಲ್ಲಿ ವೈದ್ಯರು ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, 42 ವರ್ಷದ ಮಹಿಳೆಯ ಗರ್ಭಾಶಯದಲ್ಲಿದ್ದ 2.6 ಕೆ.ಜಿ. ತೂಕದ ಬೃಹತ್ ಫೈಬ್ರಾಯ್ಡ್ (ಗರ್ಭಾಶಯದ ಗಡ್ಡೆ) ಅನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ.
ಮಹಿಳೆ ಹಲವು ತಿಂಗಳುಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ಸ್ತ್ರೀರೋಗ ತಜ್ಞ ಡಾ. ವೀರೇಂದ್ರ ಕೊಟಬಾಲ್ ನೇತೃತ್ವದಲ್ಲಿ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಗರ್ಭಾಶಯದಲ್ಲಿ ಸುಮಾರು 2.6 ಕೆ.ಜಿ. ತೂಕದ ಗಡ್ಡೆ ಇರುವುದನ್ನು ಪತ್ತೆಹಚ್ಚಲಾಯಿತು.
ಬಳಿಕ ಭಾನುವಾರ ಎರಡು ಗಂಟೆಗಳಿಗೂ ಅಧಿಕ ಕಾಲ ನಡೆದಶಸ್ತ್ರಚಿಕಿತ್ಸೆಯಲ್ಲಿ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಡಾ. ವೀರೇಂದ್ರ ಕೊಟಬಾಲ್ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯಲ್ಲಿ ಡಾ. ದೀಪಕ್ ಮಾಸರಡ್ಡಿ, ಡಾ. ಆಶಾ ಮಲಘಾಣ ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರದೀಪ್ ಸಿಂಧೂರ ಮತ್ತು ಅಜಯ್ ವಾಯಂಗಡೆ ಸಹಕರಿಸಿದರು.